ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದಾಂತ್ಯ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ನಾವು ರೈತರ ಪರವಾಗಿದ್ದು, ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ಕೇಂದ್ರ ಸರಕಾರವು ರದ್ದು ಮಾಡಬೇಕು. ಕಾಯ್ದೆಗಳಲ್ಲಿ ತಿದ್ದುಪಡಿ ತಂದರೆ ಯಾವ ಪ್ರಯೋಜನವು ಇಲ್ಲ, ಕಾಯ್ದೆಗಳನ್ನೇ ರದ್ದು ಮಾಡಬೇಕು ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರವು ವಿರೋಧ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ ಹಾಗೂ ಒಪ್ಪಿಗೆ ಪಡೆಯದೇ ತರಾತುರಿಯಲ್ಲಿ ಹಲವು ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದು ಖಂಡನೀಯ. ಗೋಹತ್ಯೆ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಪ್ರತಿಪಕ್ಷಗಳ ವಿರೋಧದ ನಡುವೆಯು ಸದನದಲ್ಲಿ ಜಾರಿಗೆ ತಂದಿದ್ದಾರೆ. ಇಂತಹ ಸರಕಾರ ಈವರೆಗೂ ಕಂಡಿಲ್ಲ, ಇದು ಜನ ವಿರೋಧಿ ಸರಕಾರ ಎಂದು ವಾಗ್ದಾಳಿ ನಡೆಸಿದರು.
ಗ್ರಾಪಂ ಚುನಾವಣೆಯಲ್ಲಿ ಸದಸ್ಯರನ್ನು ಹರಾಜು ಹಾಕುವ ಮೂಲಕ ಖರೀದಿಸುತ್ತಿರುವುದು ಜನತಂತ್ರಕ್ಕೆ ಮಾಡುವ ಅಪಚಾರವಾಗಿದೆ ಕೂಡಲೇ ಇದರ ವಿರುದ್ಧ ಚುನಾವಾಣಾ ಆಯೋಗವು ಕ್ರಮಕೈಗೊಳ್ಳಬೇಕು. ತಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಆಗ್ರಹಿಸಿದರು.