ಬೆಳಗಾವಿ: ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಸರ್ಕಾರ ಮಾತ್ರ ಮುಂಜಾಗ್ರತಾ ಸಭೆ ಮಾಡುತ್ತಿಲ್ಲ. ಯಾರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಕಿಡಿಕಾರಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯೂ ಪ್ರವಾಹದ ಸಂದರ್ಭದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಲಿಲ್ಲ. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದರೂ ಸಚಿವರು ಕಾಣುತ್ತಿಲ್ಲ. ಮುಂಜಾಗ್ರತಾ ಕ್ರಮಕೈಗೊಳ್ಳುವ ಸಂಬಂಧ ಸಭೆಯನ್ನೂ ನಡೆಸುತ್ತಿಲ್ಲ. ಕೇವಲ ಅಧಿಕಾರಿಗಳೇ ಓಡಾಡುತ್ತಿದ್ದಾರೆ. ಉಸ್ತುವಾರಿ ಸಚಿವರನ್ನು ಹೊರತುಪಡಿಸಿ ಜಿಲ್ಲೆಯ ಸಚಿವರು ಕೂಡ ಸಭೆ ನಡೆಸಬಹುದು. ಯಾರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಅವರಿಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ವಿಳಂಬ ಮಾಡಲಾಗುತ್ತಿದೆ. ಮೀಸಲಾತಿ ಪ್ರಶ್ನೆಯೇ ಇಲ್ಲ. ಸದ್ಯ ಯಾವ ಮೀಸಲಾತಿ ಇದೆಯೇ ಆ ಪ್ರಕಾರ ಚುನಾವಣೆ ನಡೆಸಬೇಕು. ಜನಪ್ರತಿನಿಧಿಗಳು ಆಯ್ಕೆಯಾಗಿದ್ದರೂ ಅವರಿಗೆ ಅಧಿಕಾರ ನಡೆಸುವ ಅವಕಾಶ ಇಲ್ಲವಾಗಿದೆ. ಎಲ್ಲ ವಾರ್ಡಗಳಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ನಡೆಸಲಾಗಿದೆ. ಅದರಂತೆ ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಎಲ್ಲ ಪಕ್ಷದಲ್ಲಿಯೂ ನಾಯಕರು ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಪ್ರಯತ್ನಿಸುವುದು ಸಹಜ. ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ. ಯಡಿಯೂರಪ್ಪ ಸೇರಿದಂತೆ ಅವರ ಮಕ್ಕಳನ್ನು ಸೈಡ್ ಲೈನ್ ಮಾಡಲಾಗಿದೆ. ಬಿಜೆಪಿಯಲ್ಲಿ ಅವರ ಮಕ್ಕಳು ಇಲ್ಲ. ಮುಂದಿನ ಚುನಾವಣೆ ನಂತರ ಅವರನ್ನು ಸಂಪೂರ್ಣವಾಗಿ ಸೈಡ್ ಲೈನ್ ಮಾಡುತ್ತಾರೆ ಎಂದರು.
ಜಿಲ್ಲೆಯ ೧೮ ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಆಕಾಂಕ್ಷಿಗಳು ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಆದರೆ, ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವುದನ್ನು ಜನವರಿಗೆವರೆಗೆ ಕಾಯ್ದುನೋಡುತ್ತೇವೆ. ಇತ್ತೀಚೆಗಷ್ಟೇ ಈ ಸಂಬಂಧ ಸಭೆಯನ್ನು ಮಾಡಿದ್ದೇವೆ. ಮುಂಬರುವ ಜನವರಿಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಮುಂಬರುವ ಜನವರಿ ತಿಂಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಲಿದೆ. ಪ್ರಭಾವಿ ಲಿಂಗಾಯತ ನಾಯಕರು ಕಾಂಗ್ರೆಸ್‌ಗೆಸೇರ್ಪಡೆಯಾಗಲಿದ್ದಾರೆ. ಸದ್ಯ ಅವರ ಗುಂಪಿನಲ್ಲಿ ಪಕ್ಷಾಂತರ ಸಂಬಂಧ ಚರ್ಚೆ ನಡೆಯುತ್ತಿದೆ. ಆಗಸ್ಟ ೩ ರಂದು ದಾವರಣೆಗೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಸಿದ್ದರಾಮೋತ್ಸವ ನಡೆಯಲಿದೆ. ಈ ಕಾರ್ಯಕ್ರಮ ಅಭಿಮಾನಿಗಳ ವೇದಿಕೆಮೇಲೆ ನಡೆಯಲಿದ್ದು, ಪಕ್ಷದ ಬ್ಯಾನರ್‌ಡಿ ಇಲ್ಲ. ರಾಜಕೀಯ ನಾಯಕರು ಎಲ್ಲರೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಪಕ್ಷ ದ ಕಾರ್ಯಕರ್ತರು ಪಾಲ್ಗೊಳ್ಳುವರು. ಬೆಳಗಾವಿ ಜಿಲ್ಲೆಯಿಂದ ಎಷ್ಟು ಜನ ಕಾರ್ಯಕರ್ತರು, ಅಭಿಮಾನಿಗಳು ಹೋಗಬೇಕೆಂಬುದರ ಕುರಿತು ಜಿಲ್ಲಾ ಕಾಂಗ್ರೆಸ್ ಸಭೆ ನಡೆಸಿ, ಚರ್ಚಿಸಿ ತೀರ್ಮಾನಕೈಗೊಳ್ಳಲಾಗುವುದು ಎಂದು ಸತೀಶ ಜಾರಕಿಹೊಳಿ ಹೇಳಿದರು.
https://www.facebook.com/103105034654941/videos/721806588923795/
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಸಮಿತಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ದಯಾನಂದ ಪಾಟೀಲ, ಸುನೀಲ ಹನಮಣ್ಣವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು
CKNEWSKANNADA / BRASTACHARDARSHAN CK NEWS KANNADA