ಘಟಫ್ರಭ: ಸಾಮಾಜಿಕ ಜಾಲತಾಣ ಸದ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಲು ಆದ್ಯತೆ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಪಟ್ಟಣದ ಡಾ. ಎನ್.ಎಸ್. ಹರ್ಡೇಕರ್ ತರಬೇತಿ ಕೇಂದ್ರದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ದೇಶ-ವಿದೇಶಗಳಲ್ಲಿನ ಬೆಳೆವಣಿಗೆಗಳನ್ನು ಸೆಂಕೆಂಡ್‌ಗಳಲ್ಲಿ ಜನಸಾಮಾನ್ಯರಿಗೆ ತಲುಪಿಸಿ ಅವರ ನಡುವೆ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನೆರವಾಗಿವೆ. ಹೀಗಾಗಿ ಪ್ರಸ್ತುತ ಪಕ್ಷ ಸಂಘಟನೆಗೆ ಸಾಮಾಜಿಕ ಜಾಲತಾಣಗಳ ಅಗತ್ಯತೆ ಇದೆ ಎಂದರು.
2023ರಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದ್ದು, ಅದಕ್ಕೆ ಇಂದಿನಿಂದಲೇ ತಯಾರಿ ನಡೆಸಬೇಕು. ಯುವಕರು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಜನರಿಗೆ ತಲುಪಿಸಬೇಕೆಂದು ಕರೆ ನೀಡಿದರು.
ದೇಶದಲ್ಲಿ ಇತ್ತೀಚಿಗೆ ಕಲುಷಿತ ವಾತಾವರಣ ನಿರ್ಮಾಣವಾಗಿದ್ದು, ಅದನ್ನು ತಡೆಯಬೇಕು. ಸರ್ವ ಧರ್ಮದವರೂ ಪ್ರಗತಿಯತ್ತ ಸಾಗಬೇಕೆಂದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ವೀರಕುಮಾರ ಪಾಟೀಲ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಾಜಿ ಶಾಸಕರಾದ ಕಾಕಾ ಸಾಹೇಬ್ ಪಾಟೀಲ್, ಶ್ಯಾಮ್ ಘಾಟಗೆ, ಕಾಂಗ್ರೆಸ್ ಮುಖಂಡರಾದ ಮಹಾವೀರ ಮೋಹಿತೆ, ಸದಾನಂದ ಡಂಗಣ್ಣವರ್, ಸುನೀಲ್ ಹಣಮಣ್ಣವರ್, ದಯಾನಂದ ಪಾಟೀಲ್, ಗಜಾನನ ಮಂಗಸೂಳಿ ಸೇರಿದಂತೆ ಇತರರು ಇದ್ದರು.