ಸವದತ್ತಿ: ಬಸವಣ್ಣ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಕರೆ ನೀಡಿದರು.
ತಾಲೂಕಿನ ಮನವಳ್ಳಿ ಪಟ್ಟಣದ ಜಿಡ್ಡಿ ಓಣಿಯ ಕಮರ ಶಾವಲಿ ದರ್ಗಾ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಯಾವುದೇ ಸಮುದಾಯವನ್ನು ಅಭಿವೃದ್ಧಿ ಪಡಿಸಲು ಒಬ್ಬರಿಂದ ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ತಮ್ಮ ಆದಾಯದಲ್ಲಿ ಸ್ವಲ್ಪ ಹಣ ಸಮಾಜದ ಪ್ರಗತಿಗೆ ಮೀಸಲಿಡಿ ಎಂದು ಸಲಹೆ ನೀಡಿದರು.
ಎಲ್ಲರೂ ಎಲ್ಲ ಧರ್ಮಗಳ ಸಿದ್ಧಾಂತ ತಿಳಿದುಕೊಳ್ಳಬೇಕು. ಮಹಮದ್ ಪೈಗಂಬರ್, ಬಸವಣ್ಣವರು ಹೆಣ್ಣು ಮಕ್ಕಳ ಶಿಕ್ಷಣ, ಪ್ರಗತಿಗೆ ಆದ್ಯತೆ ನೀಡಿದ್ದಾರೆ. ಹಾಗೇ ಸಂವಿಧಾನವೂ ಮಹಿಳೆಯರಿಗೆ ಆಧಾರ ಸ್ತಂಭವಾಗಿದ್ದು, ಹೀಗಾಗಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಏಳ್ಗೆ ಕಾಣಬೇಕೆಂದು ತಿಳಿಸಿದರು.
ಪ್ರಸ್ತುತ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಇಂತಹ ಘಟನೆಗಳಿಗೆ ಆದ್ಯತೆ ನೀಡದೇ ಎಲ್ಲ ಧರ್ಮದವರೂ ಒಗ್ಗಟ್ಟಾಗಿ ಸಾಗಬೇಕು. ಅಂದಾಗ ಎಲ್ಲಾ ಮಹಾತ್ಮರ ಪಟ್ಟ ಹೋರಾಟ ಸ್ವಾರ್ಥಕವಾಗುತ್ತದೆ ಎಂದರು.
ಮುನವಳ್ಳಿಯ ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪುರಸಭೆಯ ಎಲ್ಲ ನೂತನ ಸದಸ್ಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮನವಳ್ಳಿ ಮುಸ್ಲಿಂ ಸಮುದಾಯದ ಧರ್ಮ ಗುರುಗಳಾದ ಹಾಫೀಜ್ ಅಬ್ದುಲ್ ಮಜೀದ್ ಭೈರಕದಾರ, ಸವದತ್ತಿ ಟಿ.ಎ.ಪಿ.ಸಿ.ಎಮ್.ಎಸ್ ಅಧ್ಯಕ್ಷರಾದ ರವೀಂದ್ರ ಯಲಿಗಾರ, ಪ್ರಗತಿಪರ ರೈತರಾದ ಬಸನಗೌಡ ಗೌ. ದ್ಯಾಮನಗೌಡರ, ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ ನೇಗಿಹಾಳಪಂಚಪ್ಪ ಮಲ್ಲಾಡ, ಮೀರಸಾಬ ವಟ್ನಾಳ, ರಿಯಾಜ್ ಬಹಾದ್ದೂರಬಾಯಿ, ಎಮ್. ಆರ್. ಗೋಪಶೆಟ್ಟಿ, ಉಮೇಶ ಬಾಳಿ, ಅರ್ಜುನ ಕಾಮಣ್ಣವರ ಸೇರಿದಂತೆ ಇತರರು ಇದ್ದರು.