ಬಿಜೆಪಿಗೆ ಬೇಸತ್ತ ಜನತೆ, ದೇಶ, ರಾಜ್ಯದ ಪ್ರಗತಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನಿವಾರ್ಯ ಎಂದ ಶಾಸಕ ಸತೀಶ್ ಜಾರಕಿಹೊಳಿ
ಘಟಫ್ರಭ: ತಳ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಬಲಪಡಿಸಿದರೆ 2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಪಟ್ಟಣದ ಡಾ. ಎನ್.ಎಸ್. ಹರ್ಡೇಕರ್ ಮಂಜಪ್ಪ ತರಬೇತಿ ಕೇಂದ್ರದಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ತಾಂತ್ರಿಕತೆ ಬಹಳಷ್ಟು ಅಭಿವೃದ್ಧಿ ಹೊಂದಿದ್ದು, ಹೀಗಾಗಿ ಚುನಾವಣೆಗಳನ್ನು ಗೆಲ್ಲಬೇಕಾದರೆ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಅಂದಾಗ ನಾವು ಬೆಳಗಾವಿ ಜಿಲ್ಲೆಯಲ್ಲಿ 18ರಲ್ಲಿ 12 ಸೀಟುಗಳನ್ನು ಗೆಲ್ಲಬಹುದು ಎಂದರು.
ಕಳೆದ 8 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಭಿವೃದ್ದಿಗೆ ಆದ್ಯತೆ ನೀಡುತ್ತಿಲ್ಲ. ಭ್ರಷ್ಟಾಚಾರವೂ ಮಿತಿ ಮೀರಿದೆ. ಕಳಪೆ ಆಡಳಿತ ನೀಡುತ್ತಿದ್ದು, ಆರ್ಥಿಕತೆ ಹಳ್ಳ ಹಿಡಿದಿದೆ. ಹೀಗಾಗಿ ದೇಶ, ರಾಜ್ಯದ ಜನತೆ ಬೇಸತ್ತಿದ್ದಾರೆ ಎಂದು ಆರೋಪಿಸಿದರು.
ದೇಶ, ರಾಜ್ಯ ಸೇರಿದಂತೆ ಎಲ್ಲಾ ಸಮಾಜದವರೂ ಪ್ರಗತಿ ಕಾಣಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ. ಕಾರಣ ಯುವ ಜನತೆ ಎಚ್ಚರ ವಹಿಸುವುದು ಅಗತ್ಯವಿದೆ. ಅದೇ ಕಾರಣದಿಂದ ಘಟಪ್ರಭ ಪಟ್ಟಣದ ಸೇವಾದಳದಲ್ಲಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.