ಜಾತ್ರೆ, ಸಭೆ, ಸಮಾರಂಭ ಮಾಡಿ ಹಣ ಖರ್ಚು ಮಾಡುವುದುಕ್ಕಿಂತ ಅದೇ ಹಣ ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸಿ ಎಂದ ಶಾಸಕ ಸತೀಶ್ ಜಾರಕಿಹೊಳಿ
ಬೆಳಗಾವಿ: ಕಾಣದ ದೇವರನ್ನು ಹುಡುಕಿ ಪ್ರಯೋಜನ ಇಲ್ಲ, ನಿಮಗೆ ಆಪತ್ತು ಕಾಲದಲ್ಲಿ ಸಹಾಯ ಮಾಡುವವರೇ ದೇವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕಣಬರ್ಗಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತ್ರೆ, ಸಭೆ, ಸಮಾರಂಭ ಮಾಡಿ ಹಣ ಖರ್ಚು ಮಾಡುವುದುಕ್ಕಿಂತ ಅದೇ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸಿ, ಹಣ, ಆಸ್ತಿ ಕಳಿದುಕೊಳ್ಳಲು ಸಾಧ್ಯವಿದೆ. ಆದರೆ ಜ್ಞಾನವನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಶಿಕ್ಷಣ ನೀಡಲು ಮೊದಲ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆದು ಜಾರಿಗೆ ತಂದಿದ್ದರಿಂದ ನಾವು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟಿರಲ್ಲಿಲ್ಲ ಎಂದರೆ, ಸಂವಿಧಾನ ಜಾರಿಗೆ ತರದೆ ಇದ್ದಿದ್ದರೆ ನಾವು ಆರ್ಥಿಕವಾಗಿ ಪ್ರಗತಿ ಕಾಣಲು ಆಗುತ್ತಿರಲ್ಲಿಲ್ಲ. ಹೀಗಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾವೇಲ್ಲರೂ ಗೌರವಿಬೇಕು ಎಂದು ತಿಳಿಸಿದರು.
ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ಮೂಲಕ 5 ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ರೂ. ವಿತರಿಸಲಾಗುತ್ತಿದ್ದು, 25 ಲಕ್ಷ ರೂಪಾಯಿ ವೆಚ್ಚದಲ್ಲಿ ಪುಸ್ತಕಗಳನ್ನು ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.
ಇದೇ ವೇಳೆ ಓಲಂಪಿಕ ಕ್ರೀಡಾ ಪಟು ಸಂಜಯ ಹಮ್ಮಣ್ಣವರ, ಅಂತಾರಾಷ್ಟ್ರೀಯ ಈಜು ಪಟು ರಾಘವೇಂದ್ರ ಅನ್ವೇಕರ ಅವರಿಗೆ ವಿಶ್ವ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕ್ರೀಡಾ ರತ್ನ ಪ್ರಶಸ್ತಿ. ಆಶ್ರಯ ಫೌಂಡೇಶನ್ ಸಂಸ್ಥಾಪಕರಾದ ನಾಗರತ್ನ ರಾಮಗೌಡರ, ಸಮಾಜ ಸೇವಕರಾದ ಲಕ್ಷ್ಮಣ ಮಾಲಾಯಿ, ಸುನೀಲ ನೇಗಿಹಾಳ ಅವರಿಗೆ ವಿಶ್ವ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ರತ್ನ ಪ್ರಶಸ್ತಿ. ಸಮಾಜ ಸೇವಕರಾದ ಆಕಾಶ ಹಲಗೇಕರ್ ಅವರಿಗೆ ವಿಶ್ವ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕಲಾ ರತ್ನ ಪ್ರಶಸ್ತಿ. ಶಿಕ್ಷಕರಾದ ಸದಾಶಿವ ಘಸ್ತಿ ಅವರಿಗೆ ವಿಶ್ವ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಙಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ರಿಜ್ವಾನ್ ನಾವಗೇಕರ್, ಮುಖ್ಯಗುರು ದುಂಡಯ್ಯ ಎಸ್. ಪೂಜೇರಿ, ನಗರ ಸೇವಕಿ ಸವಿತಾ ಪಾಟೀಲ್, ತಹಶೀಲ್ದಾರ್ ಅಶೋಕ ಮನ್ನಿಕೇರಿ, ಮಲ್ಲೇಶ ಚೌಗಲೆ, ಬಸವರಾಜ ರಾಯವ್ವಗೋಳ, ಸೂನೀಲ ಪಾಟೀಲ್, ಶಿವಾಜಿ ಸುಂಟಕರ, ಸಂಜಯ ಸುಂಟಕರ, ಗುರುದೇವಗೌಡ ಪಾಟೀಲ್ ಸೇರಿದಂತೆ ಇತರರು ಇದ್ದರು