ಹುಕ್ಕೇರಿ: ಬಸವಣ್ಣನವರ ವಚನ ಕ್ರಾಂತಿ ವಿಶ್ವದ ಬಹುದೊಡ್ಡ ಕ್ರಾಂತಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ತಾಲೂಕಿನ ಬೆಳವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶರಣರ ತತ್ವ ಸಮಾವೇಶ ಮತ್ತು ಶರಣರ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೇದ ಪರಂಪರೆ, ವೈದಿಕ ಪರಂಪರೆ ಮತ್ತು ಆಚಾರ್ಯ ಪರಂಪರೆಗಳಿಗಿಂತಲೂ ಬಸವ ಪರಂಪರೆ ಶ್ರೇಷ್ಠವಾಗಿದೆ ಎಂದು ತಿಳಿಸಿದರು.
12ನೇ ಶತಮಾನದ ಅಖಂಡ ವಚನ ಸಂಸ್ಕೃತಿಯಲ್ಲಿ ಯಾವುದೇ ಬೇಧವಿರಲಿಲ್ಲ. ಎಲ್ಲ ಸಮುದಾಯದವರು ಒಂದೇ ವೇದಿಕೆಯಲ್ಲಿ ವಿಚಾರ ವಿನಿಮಯ ಮಾಡುತ್ತಿದ್ದರು. ಆದರೆ, ಪ್ರಸ್ತುತ ಅಂತಹ ವಾತವಾರಣ ಇಲ್ಲದಿರುವುದು ಶೋಚನೀಯವಾಗಿದೆ ಎಂದರು.
ಪ್ರಪಂಚದಲ್ಲಿ ಪ್ರಜಾಪ್ರಭುತ್ವವನ್ನು ತಂದವರು ಬಸವಣ್ಣನವರ, ಈ ಹಿನ್ನಲೆಯಲ್ಲಿ ಜಾತಿ, ಮತ, ಪಂಥ, ಭೇದ ಬದಿಗೊತ್ತಿ ನವ ಸಮಾಜ ನಿರ್ಮಿಸಿದ್ದಾರೆ. ಅಂತಹ ಕಾಯಕ, ದಾಸೋಹ ಪ್ರಜ್ಞೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಬಸವಣ್ಣವರನ್ನು ಯಾರು ವಿರೋಧ ಮಾಡುತ್ತಾರೆ, ಅಂತವರನ್ನು ನಾವು ವಿರೋಧಿಸುತ್ತೇವೆ. ಬಸವಣ್ಣವರನ್ನು ವಿಶ್ವ ಗುರು ಮಾಡುವ ಕೆಲಸವಾಗಬೇಕು. ಬಸವಣ್ಣವರ ಧರ್ಮವೇ ಶ್ರೇಷ್ಠ ಇದ್ದಾಗ ಮತ್ತೊಂದು ಧರ್ಮದ ಅನುಕರಣೆ ಮಾಡುವುದು ಸರಿಯಲ್ಲ. ಯಾವ ಧರ್ಮದಲ್ಲಿ ಸಮಾನತೆ ಇಲ್ಲ ಅಂತಹ ಧರ್ಮದ ಬೇನ್ನು ಹತ್ತಬೇಡಿ ಎಂದು ಹೇಳಿದರು.
ರಾಜ್ಯದಲ್ಲಿ ಯಾವುದೇ ಮಠಗಳು ಬಸವಣ್ಣವರ ಪರ ಇದ್ದರೆ ಅಂತಹ ಮಠಗಳಿಗೆ ನಾವು ಎಲ್ಲಾ ರೀತಿಯ ಸಹಾಯ-ಸಹಕಾರ ನೀಡುತ್ತೇವೆಂದು ಭರವಸೆ ನೀಡಿದ ಶಾಸಕ ಸತೀಶ್ ಜಾರಕಿಹೊಳಿ ಅವರು, ರಾಜ್ಯದ ಎಲ್ಲೆಡೆ ಬಸವಣ್ಣವರ ಮೂರ್ತಿ, ಮಠಗಳು ಹೆಚ್ಚಾಗಿ ಸ್ಥಾಪನೆಯಾಗಲಿ ಎಂದು ಕರೆ ನೀಡಿದರು.
ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ ಸೇರಿದಂತೆ ಅನೇಕ ಮಠದ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಂಚನಗೌಡ ದ್ಯಾಮನಗೌಡರ್, ಮಹಾವೀರ ಮೋಹಿತೆ ಸೇರಿದಂತೆ ಬೆಳವಿ ಗ್ರಾಮದ ಮುಖಂಡರು, ಸಾರ್ವಜನಿಕರು, ಮಹಿಳೆಯರು ಉಪಸ್ಥಿತರಿದ್ದರು.