ಗೋಕಾಕ: ರಾಮನಗರ ತಾಲೂಕಿನ ದೇವರದೊಡ್ಡಿ ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮೌಢ್ಯತೆಯ ಅನಾವರಣವಾಗಿರುವುದು ಖಂಡನೀಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಹಿಲ್ ಗಾರ್ಡನ್ ದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ದೇವರದೊಡ್ಡಿ ಗ್ರಾಮದಲ್ಲಿ ತಲೆಮಾರುಗಳಿಂದಲೂ ಋತುಮತಿಯಾದವರು, ಬಾಣಂತಿಯರನ್ನ 2 ತಿಂಗಳು 3 ದಿನ ಊರ ಹೊರಗಿಟ್ಟು ಮೌಢ್ಯತೆಯ ಪರಮಾವಧಿ ಮೀರಿದಿರುವುದು ವಿಷಾದಕವಾಗಿದೆ. ಬೇರೆ ದೇಶಗಳಲ್ಲಿ ಇಂತಹ ಮೌಡ್ಯ ಆಚರಣೆಗಳು ಇಲ್ಲ, ಕೇವಲ ಭಾರತದಲ್ಲಿ ಇವೆ. ಇಂತಹ ಮೌಡ್ಯತೆ ತೊಲಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಂತಹ ಮೌಢ್ಯ ಆಚರಣೆಗೆ ಕುಮ್ಮಕ್ಕು ನೀಡುವವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಎಚ್ಚರಿಕೆ ನೀಡಿದರು.
ಮೌಢ್ಯ ತೆಗದುಹಾಕಲು ಮಹಾನ ನಾಯಕರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ನಡೆದಿವೆ. ಸರ್ಕಾರ ಇಂತಹ ಪ್ರಕರಣಗಳತ್ತ ಹೆಚ್ಚು ಗಮನ ಹರಿಸಿ ಕಡಿವಾಣ ಹಾಕಲು ಮುಂದಾಗಬೇಕು ಎಂದರು.
ವಿದೇಶಗಳಲ್ಲಿ ಮೌಢ್ಯತೆ ಇಲ್ಲ. ದೇಶದಲ್ಲಿ ಅನಿಷ್ಟ ಪದ್ದತಿ ಇರುವುದು ಸಮಾಜಕ್ಕೆ ಮಾರಕವಾಗಿದೆ. ಇಂತಹ ಪದ್ದತಿಯನ್ನು ಬೇರು ಸಹಿತ ಕಿತ್ತಸೆಯಲು ಸರ್ಕಾರ ಮುಂದಾಗಬೇಕು. ಮಾಢ್ಯವೆಂಬ ಅನಿಷ್ಟ ಪದ್ದತಿ ಹರಡಲು ಮನುವಾದಗಳು ಮಾಡಿದ ಕುತಂತ್ರವಾಗಿದೆ ಎಂದು ಆರೋಪಿಸಿದರು.
ಅನಿಷ್ಟ ಪದ್ದತಿ ನಿರ್ಮೂಲನೆಗೆ ಸರ್ಕಾರ ವಿಫಲ: ರಾಜ್ಯದಲ್ಲಿ ಮೌಢ್ಯ ಪದ್ದತಿ ಇನ್ನು ಜೀವಂತ್ತಿದ್ದು, ಈ ಅನಿಷ್ಟ ಪದ್ದತಿ ಹೋಗಲಾಡಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಮನಗರ ತಾಲೂಕಿನ ದೇವರದೊಡ್ಡಿ ಗ್ರಾಮದಲ್ಲಿ ನಡೆದಂತಹ ಅನಿಷ್ಟ ಪದ್ದತಿ ಮುಂದೆ ದೇಶ ಹಾಗೂ ರಾಜ್ಯದಲ್ಲಿ ಮರುಕಳಿಸಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.