ರಾಯಚೂರು: ಬಿಜೆಪಿ, ಜೆಡಿಎಸ್‌ನಿಂದ ದಲಿತರು ಮುಖ್ಯಮಂತ್ರಿ ಆಗುವುದಿಲ್ಲ. ದಲಿತರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ, ಅದಕ್ಕೆ ಕಾಲಾವಕಾಶ ಬೇಕು ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಬಿಜೆಪಿ ಸರಕಾರ, ದಲಿತ ಸಮುದಾಯಗಳ ಅಭಿವೃದ್ಧಿಯ ಅನುದಾನ ಕಡಿತ ಮಾಡಿದೆ. ನಾರಾಯಣಪುರ ಬಲದಂಡೆ ನಾಲೆಯ ಸಮಗ್ರ ಆಧುನೀಕರಣದ ಹೆಸರಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ದೊಡ್ಡ ರಾಜಕಾರಣಿಗಳ ಪಾಲಿದೆ. ಸದನ ಸಮಿತಿ ತನಿಖೆ ಬಂದಾಗ ತನಿಖೆ ಮಾಡದಂತೆ ಅಡ್ಡಿಪಡಿಸಿ ಅವಮಾನಿಸಿದ್ದಾರೆ. ಸದನ ಸಮಿತಿ ತನಿಖೆ ತಡೆದು ಅವಮಾನ ಮಾಡಿದ್ದು, ರಾಜ್ಯದಲ್ಲಿ ಇದೇ ಮೊದಲು’ ಎಂದು ಕಿಡಿಕಾರಿದರು.
ಹೋರಾಟ ನಿರ್ಲಕ್ಷ್ಯ:
ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಸಮುದಾಯದ ಸ್ವಾಮಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರ ಈ ಹೋರಾಟ ನಿರ್ಲಕ್ಷ್ಯ ಮಾಡಿದೆ. ಇಂತಹ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು. ದಲಿತರ ಮೀಸಲಾತಿ ಹೆಚ್ಚಳದ ಬಗ್ಗೆ ಕಾಂಗ್ರೆಸ್ ಹೋರಾಟ ಬೆಂಬಲಿಸಲಿದೆ ಎಂದರು.
ಪಕ್ಷಾಂತರ ಸಹಜ ಕ್ರಿಯೆ:
ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಸಹಜವಾಗಿ ನಡೆಯುತ್ತಿರುತ್ತದೆ. ಅಧಿಕಾರ, ಹಣದಾಸೆಗೆ ಕೆಲವರು ನಾನಾ ಪಕ್ಷಗಳ ಬಾಗಿಲು ಬಡಿಯುತ್ತಾರೆ. ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಸಹಜ ಮತ್ತು ಅನಿವಾರ್ಯವಾಗಿರುತ್ತದೆ. ಚುನಾವಣೆಗಳು ಸಮೀಪಿಸಿದಾಗ ಪಕ್ಷಾಂತರದ ತೀವ್ರತೆ ಮತ್ತಷ್ಟು ಹೆಚ್ಚುತ್ತದೆ ಎಂದು ತಿಳಿಸಿದರು.
ಈ ವೇಳೆ ಶಾಸಕ ಡಿ.ಎಸ್.ಹೂಲಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಮುಖಂಡರಾದ ಪಾಮಯ್ಯ ಮುರಾರಿ, ಪುರಸಭೆ ಉಪಾಧ್ಯಕ್ಷ ಮಹ್ಮದ್ ರಫಿ ಸೇರಿ ಇತರರಿದ್ದರು.