ಗೋಕಾಕ: ಇತ್ತೀಚಿಗೆ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ ಸತತ ಅಧ್ಯಯನದ ಮೂಲಕ 670ನೇ ರ್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿದ ಚಿಕ್ಕೋಡಿಯ ಪ್ರಿಯಾಂಕಾ ಕಾಂಬಳೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಭಾನುವಾರ ಸನ್ಮಾನಿಸಿ, ಗೌರವಿಸಿದರು.
ಇಲ್ಲಿನ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಪ್ರಿಯಾಂಕಾ ಕಾಂಬಳೆ ಅವರಿಗೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರ ನೀಡಿ ಗೌರವಿಸಿದರು.
ಬಡತನದ ಮಧ್ಯೆಯೂ ಪ್ರಿಯಾಂಕಾ ಅವರು, ಉತ್ತಮ ಸಾಧನೆ ಮಾಡಿ ಯುವ ಜನತೆಗೆ ಮಾದರಿಯಾಗಿದ್ದಾರೆ. ಒಳ್ಳೆಯ ಅಧಿಕಾರಿಯಾಗಿ ದೇಶಕ್ಕೆ, ರಾಜ್ಯಕ್ಕೆ ಕೀರ್ತಿ ತರಲಿ. ಸತತ ಪ್ರಯತ್ನ, ಪರಿಶ್ರಮದಿಂದ ಉನ್ನತ ಹುದ್ದೆಗಳ ಅಲಂಕರಿಸಲು ಸಹಕಾರಿಯಾಗುತ್ತದೆ. ಈ ಹಿಂದೆ ತಾವು ಹೇಳಿದಂತೆ ಕೆಎಎಸ್, ಐಎಎಸ್ ಪರೀಕ್ಷೆ ಎದುರಿಸುವ ಯುವ ಜನತೆಗಾಗಿ ತರಬೇತಿ ಕೇಂದ್ರ ಆರಂಭಿಸಿ ಬೆನ್ನೆಲುಬಾಗಿ ನಿಲ್ಲುವೆ- ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕರು.
ಈ ವೇಳೆಯಲ್ಲಿ ಪ್ರಿಯಂಕಾ ಅವರ ತಂದೆ ವಿಠ್ಠಲ ಕಾಂಬಳೆ ಹಾಗು ತಾಯಿ ಮಲ್ಲವ್ಲ ಕಾಂಬಳೆಯವರಿಗೂ ಸತ್ಕರಿಸಲಾಯಿತು.
ಶಾಸಕ ಸತೀಶ ಜಾರಕಿಹೊಳಿ ಅವರ ಆಪ್ತಸಹಾಯಕ ಅರವಿಂದ ಕಾರ್ಚೆ, ವಿದ್ಯಾರ್ಥಿ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ತೋಳಿ ಭರಮಣ್ಣ, ಮಾನವ ಬಂಧುತ್ವ ವೇದಿಕೆ ಸಂಚಾಲಕರಾದ ಜೀವನ ಮಾಂಜರೇಕರ್, ಉದಯ ವಾಘಮಾರೆ, ಮಿಲನ ಕಾಂಬಳೆ ಮುಂತಾದವರು ಇದ್ದರು.