ಸವದತ್ತಿ: ‘ ನಶಿಸಿ ಹೋಗುತ್ತಿರುವ ಕಬಡ್ಡಿ ಕ್ರೀಡೆಯನ್ನ ಮತ್ತೆ ಜನಪ್ರಿಯಗೊಳಿಸುವ ಜವಾಬ್ದಾರಿ ಗ್ರಾಮೀಣ ಪ್ರದೇಶ ಯುವಕರ ಮೇಲಿದೆ’ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಸಿಂದೋಗಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ, ಮಾತನಾಡಿದರು.
‘ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಬೇಕು. ಇದರಿಂದ ನಶಿಸಿ ಹೊಗುತ್ತಿರುವ ಕಬಡ್ಡಿ ಪುನಃ ಜನಪ್ರಿಯತೆ ಪಡೆಯಲಿದೆ. ಈ ಜವಾಬ್ದಾರಿ ಗ್ರಾಮೀಣ ಪ್ರದೇಶದ ಯುವಕರ ಮೇಲಿದೆ’ ಎಂದರು.
‘ ಕ್ರೀಡೆಗೆ ಕಳೆದ ಎರಡೂವರೆ ದಶಕಗಳಿಂದ ನಮ್ಮ ತಂದೆಯವರಾದ ಸತೀಶ್ ಜಾರಕಿಹೊಳಿ ಅವರು, ನಿರಂತರ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಕೂಡಾ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವ ದಿಶೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.
‘ ಕಬಡ್ಡಿ ಸ್ಪರ್ಧೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಒಂದು ಆಟವಾಗಿದೆ. ತನ್ನದೇ ಆದ ವೈಶಿಷ್ಟತೆ ಹೊಂದಿರುವ ಕಬಡ್ಡಿ ಆಟಗಾರಿಗೆ ದೈಹಿಕ ಶಕ್ತಿ ಬೆಳೆಯಲು ಸಹಾಯಕವಾಗುವ ಜತೆಗೆ ಚತುರತೆ ಬೆಳೆಸುತ್ತದೆ’ ಎಂದು ತಿಳಿಸಿದರು.
ಇದೇ ವೇಳೆ ಗ್ರಾಮಸ್ಥರು, ಮುಖಂಡರು ರಾಹುಲ್ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡ, ಅಶ್ವಥ್ ವೈದ್ಯ, ವಿಶ್ವಾಸ್ ವೈದ್ಯ, ಚಂದ್ರಣ್ಣ ಶಾಮರಾಯ್, ತಾಲ್ಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಜಕಾತಿ, ಪಾಂಡು ಮನ್ನಿಕೇರಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.