ಹುಕ್ಕೇರಿ: “ಸಾವಿರಾರು ವರ್ಷಗಳಿಂದ ಮನುವಾದಿಗಳು ಎಸ್ಸಿ/ಎಸ್ಟಿ ಜನರ ಮೆದುಳಿಗೆ ಬೇಡಿ ಹಾಕಿದ್ದು, ಈ ಮಾನಸಿಕ ಗುಲಾಮಗಿರಿಯಿಂದ ತುರ್ತು ಹೊರಬರಬೇಕಾಗಿರುವ ಅಗತ್ಯವಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ಅರ್ಜುನವಾಡದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಬೃಹತ್ ದಲಿತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮನುವಾದಿಗಳ ಮೋಸಕ್ಕೆ ಮೊರೆಹೋದ ಎಸ್ಟಿ/ಎಸ್ಟಿ ಜನರು ತಮ್ಮ ಮೆದುಳಿಗೆ ಹಾಕಿಕೊಂಡ ಬೇಡಿ ಬಿಡಿಸಿಕೊಳ್ಳಬೇಕಿದೆ ಎಂದರು.
ಧಾರ್ಮಿಕ ಆಚರಣೆ ಹೆಸರಿನಲ್ಲಿ ಮೂಢನಂಬಿಕೆ, ಕಂದಾಚಾರ ಹೆಚ್ಚುತ್ತಿದ್ದು ಶೋಷಿತ ವರ್ಗದ ಸುಲಿಗೆ ನಡೆದಿದೆ. ಸಂವಿಧಾನದ ಮೂಲ ಆಶಯಗಳನ್ನು ಹತ್ತಿಕ್ಕುವ ಹುನ್ನಾರ ಜೋರಾಗಿದೆ. ಸಂವಿಧಾನ ಜಾರಿಗೊಳಿಸುವ ಅಧಿಕಾರವನ್ನು ವಿರೋಧಿಗಳ ಕೈಗೆ ಕೊಟ್ಟು ನಾವಿನ್ನೂ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುವಂತ ಸ್ಥಿತಿಯಲ್ಲಿದ್ದೇವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೇವಲ ಪ್ರತಿಶತ ಮೂರರಷ್ಟಿರುವ ಜನರ ಅಧಿಕಾರಕ್ಕಾಗಿ ನಮ್ಮ ಸಮುದಾಯಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ಸಮಾಜದ ಮೇಲೆ ಬೆಳಕು ಚೆಲ್ಲುವಂತ ಯಾವುದೇ ಅಂಶಗಳಿಲ್ಲ. ಕಾಶ್ಮೀರಿ ಫೈಲ್ಸ್ ಬದಲು ದಲಿತ ಫೈಲ್ಸ್, ಬಸವಣ್ಣ ಪೈಲ್ಸ್‍ನಂತ ಇತಿಹಾಸ ಪರಂಪರೆ ಹೊಂದಿರುವ ಚಿತ್ರಗಳನ್ನು ಮಾಡಬೇಕಿದೆ. ಕಾಶ್ಮೀರಿ ಪಂಡಿತರು ಎಲ್ಲಿಂದ ಬಂದವರು ಎಂದು ಅವರು ಪ್ರಶ್ನಿಸಿದರು.
ಈ ಹಿಂದೆ ಮಹಿಳೆಯರ ಸ್ವಾತಂತ್ರ್ಯ, ಶಿಕ್ಷಣ, ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು.
ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಬಸವೇಶ್ವರ, ಅಂಬೇಡ್ಕರ, ಟಿಪ್ಪು ಸುಲ್ತಾನರಂಥ ಅನೇಕ ದಾರ್ಶನಿಕರು ಹೋರಾಟ ಮಾಡಿದ್ದಾರೆ. ಹಾಗಾಗಿ ಬುದ್ಧ, ಬಸವ, ಅಂಬೇಡ್ಕರ ನಮಗೆಲ್ಲ ಆದರ್ಶವಾಗಬೇಕು. ಎಸ್ಸಿ/ಎಸ್ಟಿ, ಹಿಂದುಳಿದ ವರ್ಗ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಒಮ್ಮತದಿಂದ ಒಂದೇ ವೇದಿಕೆಗೆ ಬರಬೇಕಿದೆ ಎಂದು ಅವರು ಹೇಳಿದರು.
ತವಗಮಠದ ಬಾಳಯ್ಯಾ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಅಕ್ಷತಾ ವಿಶೇಷ ಉಪನ್ಯಾಸ ನೀಡಿದರು. ಮುಖಂಡರಾದ ಮಹಾವೀರ ಮೋಹಿತೆ, ಮಲ್ಲಿಕಾರ್ಜುನ ರಾಶಿಂಗೆ, ಕಿರಣ ರಜಪೂತ, ಸಂತೋಷ ಮುಡಸಿ, ದಿಲೀಪ ಹೊಸಮನಿ, ಬಸವರಾಜ ಕೋಳಿ, ಶ್ರೀನಿವಾಸ ವ್ಯಾಪಾರಿ, ಲಕ್ಷ್ಮಣ ಹೂಲಿ, ಪಿಂಟು ಸೂರ್ಯವಂಶಿ, ಕೆಂಪಣ್ಣಾ ಶಿರಹಟ್ಟಿ, ಮಂಜು ಪಡದಾರ, ಕೆ.ವೆಂಕಟೇಶ, ರೇಖಾ ಬಂಗಾರಿ, ಮಾರುತಿ ಕೋಳಿ, ಅಂತೋಷ ಪಾತ್ರೋಟ, ರಾಜೇಂದ್ರ ದಾಸರ, ರಾಜು ಭಜಂತ್ರಿ, ವಿಠ್ಠಲ ದಾಸರ, ಬಸವರಾಜ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ ಜನಜಾಗೃತಿ ವೇದಿಕೆಯ ಗ್ರಾಮ ಶಾಖೆಯನ್ನು ಉದ್ಘಾಟಿಸಲಾಯಿತು. ನ್ಯಾಯವಾದಿ ಆನಂದ ಕೆಳಗಡೆ ನಿರೂಪಿಸಿದರು. ಕಿರಣ ಕೋಳಿ ಸ್ವಾಗತಿಸಿದರು. ಸಂತೋಷ ದೊಡಮನಿ ವಂದಿಸಿದರು.
ದಲಿತೋತ್ಸವದ ಹಿನ್ನಲೆಯಲ್ಲಿ ಇಡೀ ಅರ್ಜುನವಾಡ ಗ್ರಾಮ ನೀಲಿಮಯವಾಗಿತ್ತು. ಪ್ರಮುಖ ರಸ್ತೆ, ವೃತ್ತಗಳು ನೀಲಿ ಬಣ್ಣದ ಭಾವುಟ, ಬಂಟಿಂಗ್ಸ್‍ನಿಂದ ರಾರಾಜಿಸಿತು. ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನರು ಭಾಗಿಯಾಗಿದ್ದರು.