ಹಿಂಡಲಗಾ ಪಿಡಿಒ ವಸಂತಕುಮಾರಿ ವಿಚಾರಣೆಗೆ!
ಬೆಳಗಾವಿ : ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ತನಿಖೆ ತೀವ್ರಗೊಂಡಿದೆ. ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಠಿಕಾಣಿ ಹೂಡಿರುವ ಉಡುಪಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇಂದು ಹಿಂಡಲಗಾ ಗ್ರಾಪಂಗೆ ಭೇಟಿ ನೀಡಿರುವ ಪೊಲೀಸರು, ಪಿಡಿಒ ವಸಂತಕುಮಾರಿ ವಿಚಾರಣೆ ನಡೆಸಿದ್ದಾರೆ. ಉಡುಪಿ ಟೌನ್ ಇನ್ಸ್‌ಪೆಕ್ಟರ್ ಶರಣಗೌಡ ನೇತೃತ್ವದ ತಂಡ ಪಿಡಿಒ ವಸಂತಕುಮಾರಿ ಅವರಿಂದ ಪ್ರಕರಣದ ಕುರಿತು ಹಲವು ಮಾಹಿತಿಯನ್ನು ಪಡೆಯಲಾಗಿದೆ.
ಸಂತೋಷ್ ಪಾಟೀಲ್ ಕಾಮಗಾರಿ ಕೈಗೊಳ್ಳುವ ಮುನ್ನ ಗ್ರಾಂ ಪಂಚಾಯತ್‌ನಿಂದ ಅನುಮತಿ ಪಡೆದಿದ್ದರಾ?, ಎಲ್ಲೆಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ, ಕಾಮಗಾರಿ ನಡೆದಿರುವುದು ನಿಜವಾ? ಹೀಗೆ ಹಲವು ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳಿರುವುದಾಗಿ ತಿಳಿದು ಬಂದಿದೆ.
ಉಡುಪಿ ಪೊಲೀಸರಿಂದ ಹಿಂಡಲಗಾ ಪಿಡಿಒ ವಿಚಾರಣೆ
ಕಳೆದ ವರ್ಷವಷ್ಟೇ ಹಿಂಡಲಗಾ ಗ್ರಾಮದೇವತೆ ಶ್ರೀ ಲಕ್ಷ್ಮಿದೇವಿ ಜಾತ್ರೆ ನಡೆದಿದೆ. ನೂರು ವರ್ಷಗಳ ಬಳಿಕ ಈ ಜಾತ್ರೆ ಮಾಡಲಾಗಿದ್ದು, ಜಾತ್ರೆಯ ನಿಮಿತ್ತ ಸಂತೋಷ ಪಾಟೀಲ 4 ಕೋಟಿ ವೆಚ್ಚದಲ್ಲಿ 108 ಕಾಮಗಾರಿ ನಡೆಸಿದ್ದರು. ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪನವರಿಂದ ಮೌಖಿಕ ಆದೇಶ ಪಡೆದಿದ್ದರು. ಬಳಿಕ ಬಿಲ್ ಮಂಜೂರಾತಿಗೆ ಸಚಿವ ಕೆ ಎಸ್ ಈಶ್ವರಪ್ಪ ಶೇ. 40 ರಷ್ಟು ಕಮೀಷನ್ ಕೇಳಿರುವುದಾಗಿ ಗುತ್ತಿಗೆದಾರ ಸಂತೋಷ ಪಾಟೀಲ ಆರೋಪಿಸಿದ್ದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ದೂರು ನೀಡಿದ್ದರು.
ಬಳಿಕ ಸಚಿವ ಈಶ್ವರಪ್ಪ ಅವರು ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದರು. ಬಳಿಕ ಸಂತೋಷ ಡೆತ್ ನೋಟ್ ನಲ್ಲಿ ಸಚಿವ ಈಶ್ವರಪ್ಪನವರ ಹೆಸರು ಬರೆದಿಟ್ಟು ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆಗೆ ವ್ಯಾಪಕ ಒತ್ತಡ ಉಂಟಾದ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.