ಧಾರ್ಮಿಕ ವಿಷಯ ಬಂದಾಗ ತಾಳ್ಮೆಯಿಂದ ವರ್ತಿಸಲು ಸತೀಶ್ ಜಾರಕಿಹೊಳಿ ಸಲಹೆ
ವಿಜಯಪುರ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪ ಅವರನ್ನು ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು ಮತ್ತು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಆಗ್ರಹಿಸಿದರು.
ನಗರದ ಗಾಂಧಿ ಚೌಕ್ ದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಉಳಿಸುವ ಎಲ್ಲಾ ರೀತಿಯ ಪ್ರಯತ್ನಗಳು ನಡೆದವು. ಆದರೆ ಕಾಂಗ್ರೆಸ್ ಪಕ್ಷದ, ಜನರ ಒತ್ತಡದಿಂದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅವರ ರಾಜೀನಾಮೆ ಪಡೆದಿದ್ದು, ರಾಜೀನಾಮೆ ಅಷ್ಟೇ ಅಲ್ಲ. ಅವರನ್ನು ಬಂಧಿಸಿ, ತನಿಖೆಗೆ ಒಳಪಡಿಸುವವರೆಗೆ ಕಾಂಗ್ರೆಸ್ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ವಿಷಯ ಬಂದಾಗ ಸಮಾಧಾನದಿಂದ ಇರಬೇಕು. ಅದರಲ್ಲಿ ಸಾಕಷ್ಟು ಫೇಕ್ ಆಗಿರುತ್ತವೆ. ಅದಕ್ಕಾಗಿ ಎಲ್ಲಾ ಜಾತಿಯವರು ಕೂಲಂಕುಷವಾಗಿ ವಿಚಾರ ಮಾಡಿ ರಿಯಾಕ್ಟ್ ಮಾಡಬೇಕು ಎಂದು ತಿಳಿಸಿದರು.
ಇನ್ನು ಹುಬ್ಬಳ್ಳಿ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಹೇಳಿಕೆ ನೀಡಿದ ಶಾಸಕ ರೇಣುಕಾಚಾರ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕ ರೇಣುಕಾಚಾರ್ಯ ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಕೆಲವು ವಿಚಾರಗಳನ್ನು ಫೇಕ್ ಮಾಡೋರು ಬಿಜೆಪಿ ಐಟಿ ಸೆಲ್ ನವರು ಎಂದು ಆರೋಪಿಸಿದರು. ಇನ್ನು ಯಾರು ತಕ್ಷಣವೇ ರಿಯಾಕ್ಟ್ ಮಾಡಬಾರದು, ಸತ್ಯಾಂಶ ತಿಳಿದು ಮಾತನಾಡಬೇಕೆಂದರು.
ಇದೇ ಸಂದರ್ಭದಲ್ಲಿ ಸಂತೋಷ ಪಾಟೀಲ್ ಸಾವಿಗೆ ಕಾರಣರಾಗಿರುವ ಕೆ.ಎಸ್. ಈಶ್ವರಪ್ಪ ಅವರನ್ನು ಪೊಲೀಸರು ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ, ಕೆ.ಎಸ್. ಈಶ್ವರಪ್ಪ ಹಾಗೂ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ನಂತರ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪ ಅವರನ್ನು ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಡಲೇ ಬಂಧಿಸಿ, ಕಾನೂನಾತ್ಮಕ ಕ್ರಮ ಜರುಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಆರ್. ಆಲಗೂರ (ರಾಜು), ಕೈ ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರಿಫ್, ಮಹಾದೇವಿ ಗೋಕಾಕ, ವಿದ್ಯಾರಾಣಿ ತುಂಗಳ, ಸುನೀಲ ಹನುಮಣ್ಣವರ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ: ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲೆ ಘಟಪ್ರಭ ಸೇವಾದಳದಲ್ಲಿ ತರಬೇತಿ ನೀಡುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ತಪ್ಪದೇ ತರಬೇತಿ ಪಡೆಯಬೇಕು. ತರಬೇತಿ ಪಡೆದಾಗ ಮಾತ್ರ ಪಕ್ಷ ಸಂಘಟಿಸಲು ಸಾಧ್ಯವಿದೆ ಎಂದು ಇದೇ ವೇಳೆ ಸಲಹೆ ನೀಡಿದರು.