ಮೂಡಲಗಿ: ಪ್ರಸ್ತುತ ನೀರನ್ನು ಸರಿಯಾಗಿ ಸದ್ಬಳಕೆ ಮಾಡಿ ಶೇಖರಣೆ ಮಾಡುವುದು ಅಗತ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಪಟಗುಂದಿ ಗ್ರಾಮದಲ್ಲಿ ಸತೀಶ್ ಶುಗರ್ಸ ಹುಣಶ್ಯಾಳ ಪಿ.ಜಿ ಹಾಗೂ ಶ್ರೀ 1008 ಸುಪಾರ್ಶ್ವನಾಥ ದಿಗಂಬರ ಜೈನ್ ಮಂದಿರ ಶಿಕ್ಷಣ ಟ್ರಸ್ಟ್ ಪಟಗುಂದಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಕಬ್ಬಿನ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.
ಭೂಮಿಗೂ ವಯಸ್ಸು ಇದೆ. ಹೀಗಾಗಿ ಪರಿಸರ ರಕ್ಷಣೆ ಮಾಡಬೇಕು. ಈಗಾಗಲೇ ಓಝೋನ್ ಪದರು ಹಾಳಾಗಿದ್ದು, ಮಳೆ, ಬೆಳೆ ಮೇಲೆ ಪರಿಣಾಮ ಬೀರುತ್ತಿದ್ದು, ಪರಿಸರ ರಕ್ಷಣೆಯೂ ಶಾಸಕರು, ಮಂತ್ರಿಗಳಿಂದ ಸಾಧ್ಯವಿಲ್ಲ. ಎಲ್ಲರೂ ಪರಿಸರ ರಕ್ಷಣೆಗೆ ಗಮನ ಹರಿಸಬೇಕೆಂದು ತಿಳಿಸಿದರು.
ರೈತರು ಮಾರ್ಗದರ್ಶನ ಪಡೆದು ಕಡಿಮೆ ಖರ್ಚಿನಲ್ಲಿ ಇದ್ದ ಭೂಮಿಯಲ್ಲಿ ಹೆಚ್ಚಿನ ಇಳುವರಿ ತೆಗೆಯಲು ಮುಂದಾಗಬೇಕು. ಕಳೆದ ನಾಲ್ಕು ವರ್ಷದಿಂದ ಮಳೆ ಚೆನ್ನಾಗಿ ಆಗುತ್ತಿದ್ದು, ನೀರಿನ ಕೊರತೆ ಇಲ್ಲ. ಕಾರಣ ರೈತರು ಕೃಷಿಯಲ್ಲಿ ತೊಡಗಿ ಪ್ರಗತಿ ಹೊಂದಬೇಕೆಂದು ತಿಳಿಸಿದರು.
ಕಬ್ಬು ಬೆಳೆಯಲ್ಲಿ ಸಾಕಷ್ಟು ಸುಧಾರಣೆಗಳು ಆಗಿದ್ದು, ಅವುಗಳನ್ನು ರೈತರು ಅಳವಡಿಸಿಕೊಳ್ಳಬೇಕು. ಜತೆಗೆ ಮಕ್ಕಳ ಓದಿನ ಕಡೆ ಪ್ರಾಮುಖ್ಯತೆ ನೀಡಬೇಕು. ಅನಾವಶ್ಯಕ ಖರ್ಚಿಗೆ ಮೀತಿ ಇರಲಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಾಂಡು ಮನ್ನಿಕೇರಿ, ಅಜಿತ್ ಹೊಸಮನಿ. ಜೆಡಪ್ಪಾ, ಮಲ್ಲಿಕಾರ್ಜುನ ಕಬ್ಬೂರ, ರಾಜು ಕಸ್ತೂರಿ, ಪಾರಿಶ ಹುಕ್ಕೇರಿ, ಎಚ್.ಪಿ. ನಾಯಿಕ ಸೇರಿದಂತೆ ಇತರರು ಇದ್ದರು.