ಬೆಳಗಾವಿ: ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಕಡೋಲಿ ಜಿಪಂ ವ್ಯಾಪ್ತಿಯ ಮನ್ನಿಕೇರಿ, ಹಂದಿಗನೂರ, ಬೋಡಕೇನಹಟ್ಟಿ ಗ್ರಾಮದಲ್ಲಿ ನಬಾರ್ಡ್ ಆರ್. ಐ. ಡಿ. ಎಫ್ ಅತಿವೃಷ್ಠಿ ಯೋಜನೆಯಲ್ಲಿ ಮುಂಜೂರಾದ 66 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸರ್ಕಾರಿ ಶಾಲಾ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಳ್ಳೆಯ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಹೀಗಾಗಿ ಮಕ್ಕಳಿಗೆ ಶಿಕ್ಷಣ ಒದಗಿಸಲು ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗುವುದು, ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ನರೇಗಾ ಯೋಜನೆ ಸಹಕಾರಿಯಾಗಿದೆ. ಜಿಪಂ ಸಿಇಓ ಕೂಡ ಶಾಲೆಗಳ ಅಭಿವೃದ್ಧಿಗೆ ನರೇಗಾ ಯೋಜನೆಯಲ್ಲಿ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.
ಇದೇ ರೀತಿ ಅಭಿವೃದ್ಧಿ ಮುಂದೆವರಿದರೆ ಜಿಲ್ಲೆಯ ಎಲ್ಲಾ ಶಾಲೆಗಳು ಇನ್ನೊಂದು ವರ್ಷದಲ್ಲಿ ಅಭಿವೃದ್ಧಿ ಹೊಂದುವಲ್ಲಿ ಯಾವುದೇ ಸಂದೇಹವಿಲ್ಲ. ಮತಕ್ಷೇತ್ರದ ಎಲ್ಲಾ ಶಾಲೆಗಳಿಗೆ ಹೋಗಲು ರಸ್ತೆಗಳನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದೆ. ಇನ್ನೂ ಎನಾದರೂ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತಂದರೆ, ಅವುಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಪ್ರದೀಪ್ ಎಂ.ಜೆ, ಜಿಪಂ ಮಾಜಿ ಸದಸ್ಯ ಸಿದ್ದು ಸುಣಗಾರ, ರಾಮಣ್ಣ ಗೂಳಿ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಚೆನ್ನಪ್ಪಾ ನಾಯಕ, ಜೋತಿಭಾ ತವನೋಜ, ಸುರೇಶ ಜಾಧವ, ಜೋತಿಭಾ ತವನೋಜ, ನಾಗೇಶ ನಾಯಕ, ದಯಾನಂದ ಬಸ್ಸರಗಿ, ಉಮೇಶ ಕಾಂಬಳೆ, ನಾರಾಯಣ ಕೋಲೆ, ನಿಂಗಪ್ಪಾ ನಾಯಕ, ರಾಜು ಮಾಯನ್ನಾ, ಭೀಮರಾವ್ ನಾಯಕ, ಸಿದ್ದಿಕ ಅಂಕಲಗಿ ಸೇರಿದಂತೆ ಇತರರು ಇದ್ದರು.