ವಿಜಯಪುರ: ವಿಶ್ವಗುರು ಬಸವಣ್ಣವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಅಪೂರ್ವವಾದ ಕೊಡುಗೆ ನೀಡಿದ್ದಾರೆ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆದ ಕರ್ತೃ ಜಗದ್ಗುರು ಶ್ರೀ ಪಂಪಾಪತಿ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಜ್ಞಾನ ದಾಸೋಹಿ ಶ್ರಿ ಮ.ನಿ.ಪ್ರ. ಸಂಗನಬಸವ ಮಹಾಶಿವಯೋಗಿಗಳ ಪುಣ್ಯಾರಾಧನೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ವಿಶ್ವಗುರು ಬಸವಣ್ಣವರ ನಾಡಿನಲ್ಲಿ ನಾಲ್ಕು ದಿನಗಳ ಕಾಲ ಈ ಒಂದು ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ. ಈ ಕಾರ್ಯಕ್ರಮದಲ್ಲಿ ಬಸವಣ್ಣವರ ವಚನಗಳ ಹಾಗೂ ಅವರ ಆದರ್ಶಗಳ ಕುರಿತು ಸ್ವಾಮೀಜಿಗಳ ನೇತೃತ್ವದಲ್ಲಿ ತಿಳಿ ಹೇಳುವ ಕಾರ್ಯಕ್ರಮ ಇದಾಗಿದೆ ಎಂದರು.
ಎಲ್ಲಕ್ಕಿಂತ ಮಿಗಿಲಾಗಿ ಶೋಷಣೆ ರಹಿತ ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ ಸುಧಾರಕ ಬಸವಣ್ಣನವರು. ಅವರು ಪ್ರತಿಪಾದಿಸಿದ ಆದರ್ಶಗಳು ನಮಗೆ ಸದಾಕಾಲ ವಿಶ್ವಭ್ರಾತೃತ್ವದ ಸನ್ಮಾರ್ಗದಲ್ಲಿ ನಡೆಯುವ ಬೆಳಕನ್ನು ನೀಡುವಂತಾಗಲಿ ಎಂದರು.
ಸೂತ್ತುರು ಜಗದ್ಗುರುಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಪುರದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಬಸವನಬಾಗೇವಾಡಿಯ ವಿರಕ್ತಿಮಠದ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿ, ಅಭಿನವ ಸಿದ್ದಾರೂಢ ಮಹಾಸ್ವಾಮೀಜಿ, ಶಿವಬಸವ ದೇವರು ದಿವ್ಯ ಉಪಸ್ಥಿತಿ ವಹಿಸಿದ್ದರು.
ಇದೇ ವೇಳೆ ವೇದಿಕೆ ಮೇಲಿರುವ ಶ್ರೀಗಳು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಈ ವೇಳೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಶಾಸಕ ಶಿವಾನಂದ ಪಾಟೀಲ, ಗೌರವಾನ್ವಿತ ನ್ಯಾಯಮೂರ್ತಿ ಸುಭಾಷ ಅದಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಐಜಿಪಿ ರಾಘವೇಂದ್ರ ಸುಹಾಸ್, ಚಂದ್ರಶೇಖರ ನುಗ್ಗಿ, ರವಿ ದಾಮಜಿ, ಬಸವರಾಜ ಡೋಣೂರ, ಸಾವಿತ್ರಮ್ಮ ಕೊಂಡ್ಲಹಳ್ಳಿ, ಡಾ. ನಿಂಗಣ್ಣ ಕುಲಬುರಗಿ ಸೇರಿದಂತೆ ಇತರರು ಇದ್ದರು.