-ಉ. ಖಾನಾಪುರ ಅರ್ಬನ್ ಕೋ ಆಪರೇಟಿವ್ ಸೊಸೈಟಿ 25ನೇ ವರ್ಷದ ಬೆಳ್ಳಿ ಹಬ್ಬ ಹಾಗೂ ಹೊಸ ಸರ್ಕಾರಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭ
ಯಮಕನಮರಡಿ: ಸಕಾಲಕ್ಕೆ ಸಾಲ ಮರುಪಾವತಿಸಿದಾಗ ಮಾತ್ರ ಸಹಕಾರಿ ಸಂಘಗಳು ಮುಂದೆ ಬರಲು ಸಾಧ್ಯ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಉ. ಖಾನಾಪುರ ಗ್ರಾಮದಲ್ಲಿ ನಡೆದ ಉ. ಖಾನಾಪುರ ಅರ್ಬನ್ ಕೋ ಆಪರೇಟಿವ್ ಸೊಸೈಟಿ 25ನೇ ವರ್ಷದ ಬೆಳ್ಳಿ ಹಬ್ಬ ಹಾಗೂ ಹೊಸ ಸರ್ಕಾರಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಹಕಾರಿ ಸಂಘಗಳು ರೈತರ ಜೀವನಾಡಿಯಾಗಿದ್ದು, ಈ ಸಂಘಗಳ ಸಹಾಯದಿಂದ ರೈತರು ತಮ್ಮ ಜೀವನವನ್ನು ಉಜ್ವಲಾಗಿಸಿಕೊಳ್ಳಲು ಮುಂದಾಗಬೇಕು ಎಂದರು.
ಉ. ಖಾನಾಪೂರ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಕಡಿಮೆ ಅವಧಿಯಲ್ಲಿ ಜನ ಸೇವೆ ಮಾಡುವ ಜತೆಗೆ 10ಕೋಟಿ ರೂ. ವ್ಯವಹಾರ ನಡೆಸುವದರ ಮೂಲಕ ಸಹಕಾರಿ ರಂಗದಲ್ಲೇ ಒಂದು ಸಾಧನೆ ಮಾಡಿದೆ. ಇಂಥಹ ಸಹಕಾರಿ ಸಂಘಗಳಿಗೆ ನಾನು ಶಾಸಕನಾಗಿದ್ದಾಗಿಂದಲೂ ಸಹಾಯ ಸಹಕಾರ ಮಾಡಲಾಗುತ್ತಿದೆ ಎಂದರು.
ಕಳೆದ 14 ವರ್ಷದಿಂದ ನನ್ನ ಅಧಿಕಾರ ಅವಧಿಯಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗಿದೆ. ಮುಂದೆಯೂ ಈ ಕ್ಷೇತ್ರವನ್ನು ಇನಷ್ಟು ಅಭಿವೃದ್ಧಿ ಮಾಡುವ ಶಪಥ ಮಾಡಿದ್ದೇನೆ. ಇಲ್ಲಿವರೆಗೂ ಕ್ಷೇತ್ರ ಜನತೆ ನನಗೆ ಸಹಕಾರ ನೀಡಿದ್ದಿರಿ, ಮುಂದೆಯೂ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮರುಳಸಿದ್ಧೇಶ್ವರ ಬ್ರಹನ್ಮಠದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಮಾಜಿ ಸಚಿವ ಎ.ಬಿ. ಪಾಟೀಲ, ದುಂಡಪ್ಪ ಹೆಬ್ಬಾಳಿ, ಸಚೀನ ಹೆಬ್ಬಾಳಿ, ಕುಮಾರಸ್ವಾಮಿ ಮಠಪತಿ, ಪ್ರಭಾ ಹೆಬ್ಬಾಳಿ ಸೇರಿದಂತೆ ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಇದ್ದರು.