ಯಮಕನಮರಡಿ: ಗುರಿ ಇಟ್ಟು ಅಧ್ಯಯನ ಮಾಡಿದರೆ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಯುವ ನಾಯಕಿ ಪ್ರಿಯಂಕಾ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಪಾಶ್ಚಾಪೂರ ಪತ್ತೇಖಾನ ದೇಸಾಯಿ ಹೈಸ್ಕೂಲ್ ಗೆ ಭೇಟಿ ನೀಡಿ ಮಾತನಾಡಿದ ಅವರು, 10ನೇ ತರಗತಿ ವಿದ್ಯಾರ್ಥಿ ಜೀವನದ ಮೊದಲ ಘಟ್ಟವಾಗಿದ್ದು, ಈ ತರಗತಿಯಲ್ಲಿ ಉತ್ತಮ ಅಂಕ ಪಡೆಯಬೇಕೆಂದು ಸಲಹೆ ನೀಡಿದರು.
ನಮ್ಮ ತಂದೆ, ಶಾಸಕರಾದ ಸತೀಶ್ ಜಾರಕಿಹೊಳಿ ಅವರು ಈಗಾಗಲೇ ಮತಕ್ಷೇತ್ರದ ವಿವಿಧ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. 10ನೇ ತರಗತಿ ವಿದ್ಯಾರ್ಥಿಗಳಿಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ಮೂಲಕ ಪುಸ್ತಕಗಳನ್ನು ನೀಡಿದ್ದು, ಅವುಗಳ ಅಧ್ಯಯನ ಕೈಗೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯರಿ ಎಂದು ಕರೆ ನೀಡಿದರು.
ಯುವಕರು ಈ ದೇಶದ ಶಕ್ತಿಯಾಗಿದ್ದು, ಶಿಕ್ಷಣ ಪಡೆದು ನಿಮ್ಮ ತಂದೆ-ತಾಯಿ ಕನಸನ್ನು ನನಸು ಮಾಡಬೇಕು. ಮುಂದೆ ಡಾಕ್ಟರ್, ಇಂಜಿನಿಯರ್, ಐಎಎಸ್, ಐಪಿಎಸ್ ನಂತಹ ಹುದ್ದೆಗಳನ್ನು ಅಲಂಕರಿಸಿದರೆ ಸಮಾಜ ಸೇವೆಯಲ್ಲಿಯೂ ತೊಡಗಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಗುರು ಶಕೀಲ್.ದೇಸಾಯಿ, ಫಜಲ್ ಮಕಾನದಾರ, ನೈಜೀಲಾ ಕುಲಕರ್ಣಿ, ಸಿದ್ದರಾಮ ಬಸ್ಸಾಪೂರಿ, ಚಂದ್ರು ಅಡಿಮನಿ ಸೇರಿದಂತೆ ಇತರರು ಇದ್ದರು.