ಚಿಕ್ಕೋಡಿ: ಯುವಕರು ಗುರು, ಹಿರಿಯರ ಮಾರ್ಗದರ್ಶನ ಪಡೆದು ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕೆಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ತಾಲೂಕಿನ ವಾಳಕಿ ಗ್ರಾಮದಲ್ಲಿ ನಡೆದ ಶ್ರೀ ಮಸೋಬಾ ದೇವಸ್ಥಾನದ ಕಟ್ಟಡ ವಾಸ್ತುಶಾಂತಿ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾರ್ವಜನಿಕ ಕಟ್ಟಡಗಳನ್ನು ಸ್ವಚ್ಛತೆಯಿಂದ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ಇಂದು ದಲಿತರು ಸಮಾಜದಲ್ಲಿ ಜೀವನ ನಡೆಸಲು ಸಾಧ್ಯವಾಗಿದೆ. ಆದ್ದರಿಂದ ಯುವಕರು ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಸಮ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದರು.
ಸಮಾಜದಲ್ಲಿ ಬೇಧ-ಭಾವ ಮಾಡಬಾರದು, ಒಳ್ಳೆಯ ಸಮಾಜ ಕಟ್ಟುವಲ್ಲಿ ನಮ್ಮೆಲ್ಲರ ಪಾತ್ರ ಇದೆ. ಹೀಗಾಗಿ ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆ ಮಾನವೀಯ ಮೌಲ್ಯ ಬೆಳೆಸಬೇಕೆಂದು ಕರೆ ನೀಡಿದರು.
ನಿಡಸೋಶಿ ಸಿದ್ಧ ಸಂಸ್ಥಾನ ಮಠದ ಶ್ರೀ ಮ.ನಿ.ಪ್ರ. ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ರಾಜನಹಳ್ಳಿ ಗುರು ಪೀಠದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಶಡ್ಲೆಕೋಣ ವಾಲ್ಮೀಕಿ ಮಹಾ ಸಂಸ್ಥಾನಮಠದ ಪ.ಪೂ.ಶ್ರೀಶ್ರೀಶ್ರೀ ಸಂಜಯಕುಮಾರನಂದ ಮಹಾಸ್ವಾಮಿಗಳು, ಶ್ರೀ ವರದಾನೇಶ್ವರ ಮಹಾಸ್ವಾಮಿಗಳು, ಶ್ರೀ ಪ್ರಾಣಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿಪಾಣಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಅಂಗಡಿಗೆ ಭೇಟಿ ನೀಡಿ, ಲಸ್ಸಿ ಸೇವಿಸಿ ಮತ್ತೊಮ್ಮೆ ಸರಳತೆ ಮರೆದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಾಕಾಸಾಹೇಬ್ ಪಾಟೀಲ್, ಪ್ರತಾಪ ಮದಕರಿ, ಯಲ್ಲಪ್ಪಾ ನಾಯಿಕ, ತುಕಾರಾಮ ನಾಯಿಕ ಮಹಾರಾಜ, ಚಿಕ್ಕೋಡಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಇತರರು ಇದ್ದರು.