ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ
ಯಮಕನಮರಡಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಿಳೆಯರಿಗೆ ನೀಡಿದ ಕೊಡುಗೆ ಮರೆಯಬಾರದೆಂದು ಯುವ ನಾಯಕಿ ಪ್ರಿಯಂಕಾ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಹತ್ತರಗಿ ಗ್ರಾಮದಲ್ಲಿ ಆನಂದಪೂರ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಸ್ವ-ಸಹಾಯ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರ ಶಿಕ್ಷಣ, ಸಮಾನತೆಗಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಹಳಷ್ಟು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಮಹಿಳೆಯರಿಗೆ ದೇಶದಲ್ಲಿ ಮೊದಲು ಶಿಕ್ಷಣ ನೀಡಲು ಮುಂದಾಗಿದ್ದು ಸಾವಿತ್ರಿಬಾಯಿ ಫುಲೆಯವರು, ಅವರ ಅಂದಿನ ಹೋರಾಟದ ಫಲವಾಗಿ ಇಂದು ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ. ಕಾರಣ ಅಂತಹ ಮಹನೀಯರನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ ಎಂದರು.
ಹೆಣ್ಣು ಮಕ್ಕಳಿಗೂ ಪಾಲಕರು ಶಿಕ್ಷಣ ನೀಡಲು ಆದ್ಯತೆ ನೀಡಬೇಕು. ಶಿಕ್ಷಣ ನೀಡಿದರೆ ಸಾಲದು, ಅವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ಬಹಳ ಸ್ಪರ್ಧೆ ಇದೆ. ಆದ್ದರಿಂದ ಸ್ಪರ್ಧಾ ಜಗತ್ತನ್ನು ಮೆಟ್ಟಿ ನಿಲ್ಲವ ಶಕ್ತಿ ಮಹಿಳೆಯರು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಇದೇ ವೇಳೆ 30ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹತ್ತರಗಿ ಕಾರೀಮಠದ ಶ್ರೀ.ಮ.ನಿ.ಪ್ರ.ಸ್ವ. ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಉಳ್ಳಾಗಡ್ಡಿ ಖಾನಾಪುರದ ಶ್ರೀ ಮರುಳಸಿದ್ದೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹತ್ತರಗಿ ಹರಿ ಮಂದಿರದ ಶ್ರೀ ಪರಮಪೂಜ್ಯ ನರಸಿಂಹ ಗುರೂಜಿ ಗೋಸಾವಿ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಆನಂದಪೂರ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಮಹಾದೇವ ರಾ. ಪಟ್ಟೊಳ್ಳಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಗೀತಾ ಪಾತ್ರೋಟ, ಗ್ರಾಪಂ ಉಪಾಧ್ಯಕ್ಷೆ ಅಕ್ಷತಾ ಭೀಮಗೋಳ ಸೇರಿದಂತೆ ಇತರರು ಇದ್ದರು.