ಬೆಳಗಾವಿ- ಚಿಕ್ಕೋಡಿ ಜಿಲ್ಲೆಗಳ ಮುಂಚೂಣಿ ಘಟಕದ ಪದಾಧಿಕಾರಿಗಳು, ಮುಖಂಡರ ಸಭೆ
ಬೆಳಗಾವಿ: ಪದವೀಧರರ ಮತ್ತು ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಇಂದಿನಿಂದಲೇ ತಯಾರಿ ನಡೆಸಿ, ನಗರ, ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಗಳ ಮುಂಚೂಣಿ ಘಟಕದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 33 ವಿಧಾನಸಭೆ ಕ್ಷೇತ್ರಗಳಲ್ಲಿ ಮುಂಚೂಣಿ ಘಟಕದ ಪದಾಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಕೆಸಲ ಮಾಡಬೇಕೆಂದರು.
ಬೆಳಗಾವಿ ಸೇರಿದಂತೆ ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸ ಮಾಡಿ, ಸಭೆಗಳನ್ನು ಮಾಡುತ್ತೇನೆ ಎಂದ ಅವರು, ಮುಖಂಡರು ನಗರ ಪ್ರದೇಶಗಳಿಗೆ ಸೀಮಿತವಾಗದೇ ಗ್ರಾಮೀಣ ಭಾಗದಲ್ಲಿರುವ ಪದವೀಧರರನ್ನು ಸಂಪರ್ಕಿಸಬೇಕೆಂದು ಸಲಹೆ ನೀಡಿದರು.
ಪದವೀಧರರ ಮತ್ತು ಶಿಕ್ಷಕರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ನ ಮತ ಬ್ಯಾಂಕ್ ಈಗಾಗಲೇ ಇದೆ. ಕಾಂಗ್ರೆಸ್ ಗೆಲುವಿಗೆ ಅಭ್ಯರ್ಥಿಗಳು ಎಲ್ಲ ಮತಕ್ಷೇತ್ರದ ಮುಖಂಡರೊಂದಿಗೆ ಚರ್ಚೆ, ಸಭೆಗಳನ್ನು ಮಾಡಬೇಕು. ಆದಷ್ಟು ಬೇಗ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದರು.
ಮುಂಚೂಣಿ ಘಟಕದ ಪದಾಧಿಕಾರಿಗಳ ಮೇಲೆ ಜಾಸ್ತಿ ಜವಾಬ್ದಾರಿ ಇದ್ದು, ಅದನ್ನು ಸರಿಯಾಗಿ ನಿಭಾಯಿಸಬೇಕು. ಪಕ್ಷದ ಬೆಳವಣಿಗೆಗೆ ಶ್ರಮಿಸಿದ ಪದಾಧಿಕಾರಿಗಳನ್ನು ಗುರುತಿಸಿ ಸ್ಥಾನಮಾನ ನೀಡಲಾಗುವುದ್ದು, ಜತೆಗೆ ಸಹಾಯ, ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಮಾಜಿ ಶಾಸಕ ಎ.ಬಿ. ಪಾಟೀಲ್ ಮಾತನಾಡಿ, ಹಳ್ಳಿಗಳಲ್ಲಿ ಸಾಕಷ್ಟು ಜನ ಪದವಿ ಮುಗಿಸಿದ್ದರೂ ಇನ್ನೂವರೆಗೆ ಪದವೀಧರರ ಚುನಾವಣೆ ಪಟ್ಟಿಯಲ್ಲಿ ಅವರು ನೋಂದಣಿ ಮಾಡಿಕೊಡಿಲ್ಲ. ಅಂತವರನ್ನು ಸಂಪರ್ಕಿಸಿ ಚುನಾವಣೆ ಗುರುತಿನ ಚೀಟಿ ಮಾಡಿಸಬೇಕೆಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಸತೀಶ್ ಅಣ್ಣಾ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪಕ್ಷ ಸಂಘಟಿಸಿ, ಗ್ರಾಮ ಮಟ್ಟದಲ್ಲಿ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು.
ಮಾಜಿ ಶಾಸಕ ಫಿರೋಜ್ ಸೇಠ್ ಮಾತನಾಡಿ, ಎಲ್ಲಾ ಮುಖಂಡರು ತಮ್ಮ ತಮ್ಮ ಕ್ಷೇತ್ರದಲ್ಲಿ ಚುನಾವಣಾ ತಯಾರಿ ಮಾಡಿಕೊಂಡರೆ ಅಭ್ಯರ್ಥಿ ಗೆಲುವಿಗೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವೀರಕುಮಾರ ಪಾಟೀಲ್, ಎ.ಬಿ. ಪಾಟೀಲ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕರಾದ ಕಾಕಾಸಾಹೇಬ್ ಪಾಟೀಲ್, ಫಿರೋಜ್ ಸೇಠ್, ರಾಜು ಕಾಗೆ, ಶಾಮ ಘಾಟಗೆ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜು ಶೇಠ್, ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಮಹಾವೀರ ಮೋಹಿತೆ, ಪ್ರದೀಮ್ ಎಂ.ಜೆ, ಪಂಚನಗೌಡ ದ್ಯಾಮನಗೌಡರ, ಕಿರಣ ಸಾಧುವನ್ನವರ್, ಸುನೀಲ ಹಣಮನ್ನವರ್, ಬಸವರಾಜ ಕೌಜಲಗಿ ಸೇರಿದಂತೆ ಮುಂಚೂಣಿ ಘಟಕದ ಪದಾಧಿಕಾರಿಗಳು ಇದ್ದರು.