ವ್ಯಾಯಾಮ ಶಾಲಾ ಉಪಕರಣಗಳ ವಿತರಣಾ ಸಮಾರಂಭ
ಯಮಕನಮರಡಿ: ಆರೋಗ್ಯವೇ ಭಾಗ್ಯವಾಗಿದ್ದು, ಯುವಕರು ಆರೋಗ್ಯದ ಕಡೆ ಗಮನ ಹರಿಸಬೇಕು. ನಿಮಗೆ ಬೇಕಾದ ಎಲ್ಲಾ ರೀತಿಯ ವ್ಯಾಯಾಮ ಸಾಮಗ್ರಿ ನೀಡಲು ಬದ್ಧರಿದ್ದು, ಓದಿಗೂ ಆಸಕ್ತಿ ತೊರಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಅಲದಾಳ ಗ್ರಾಮದಲ್ಲಿ ನಡೆದ ವ್ಯಾಯಾಮ ಶಾಲಾ ಉಪಕರಣಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಮತ ಕ್ಷೇತ್ರದಲ್ಲಿ ಶಾಲಾ ಕಟ್ಟಡಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಮತಕ್ಷೇತ್ರದ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಲ್ಕು ಸಾವಿರ ಡೇಸ್ಕ್ ಸೇರಿದಂತೆ ಇನ್ನಿತರ ಪರಿಕರಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ಈಗಾಗಲೇ ವಿವಿಧ ಗ್ರಾಮಗಳಿಗೆ ಕುರ್ಚಿಗಳು, ಸೌಂಡ್ ಸಿಸ್ಟಮ್ ವಿತರಿಸಲಾಗಿದ್ದು, ಇನ್ನು ಅನೇಕ ಗ್ರಾಮಗಳಿಗೆ ವಿತರಿಸಬೇಕಿದ್ದು, ಆರು ತಿಂಗಳೊಳಗೆ ಮತಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಸೌಂಡ್ ಸಿಸ್ಟಮ್, ಕುರ್ಚಿಗಳನ್ನು ಬೇಡಿಕೆ ಅನುಗುಣವಾಗಿ ವಿತರಿಸುತ್ತೇವೆಂದು ಭರವಸೆ ನೀಡಿದರು.
ಪಾಶ್ಚಪೂರ ಪಿ.ಯು ಕಾಲೇಜಿಗೆ ಇಂದು ಜೀಮ್ ಸಲಕರಣೆಗಳನ್ನು ನೀಡುತ್ತಿದ್ದು, ಅವುಗಳನ್ನು ಉಪಯೋಗ ಮಾಡಿಕೊಳ್ಳಬೇಕು. ಈಗಾಗಲೇ 60 ಗ್ರಾಮಗಳಿಗೆ ಜೀಮ್ ಸಲಕರಣೆಗಳನ್ನು ನೀಡಿದ್ದು, ಅವು ಸರಿಯಾಗಿ ಬಳಕೆಯಾಗುತ್ತಿಲ್ಲ. ಆ ರೀತಿ ಆಗದಂತೆ ಕ್ರಮ ವಹಿಸಿ ಎಂದು ಸಲಹೆ ನೀಡಿದರು.
ಆರ್ಮಿ, ಪೊಲೀಸ್ ಪೇದೆ ಹುದ್ದೆಗಳಿಗೆ ಸೇರಬಯಸುವ ಯುವಕರಿಗೆ ಘಟಪ್ರಭ ಸೇವಾದಳದಲ್ಲಿ ಉಚಿತ ತರಬೇತಿ ನೀಡುತ್ತಿದ್ದು, 1ನೇ ಹಂತದ ತರಬೇತಿ ಪೂರ್ಣವಾಗಿದ್ದು, ಇವತ್ತು 2ನೇ ಹಂತದ ತರಬೇತಿ ನೀಡಲು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ತರಬೇತಿ ಬೆಳಗಾವಿ ಜಿಲ್ಲೆಗೆ ಅಷ್ಟೇ ಸೀಮಿತವಾಗಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಯ ಯುವಕರಿಗೆ ಅವಕಾಶ ಕಲ್ಪಿಸುತ್ತಿದ್ದು, ಒಂದು ಬ್ಯಾಚ್ ನಲ್ಲಿ 75 ವಿದ್ಯಾರ್ಥಿಗಳಿಗೆ ಅವಕಾಶವಿದೆ. 3ನೇ ಬ್ಯಾಚ್ ನಲ್ಲಿ ವಿದ್ಯಾರ್ಥಿನಿಯರಿಗೂ ಅವಕಾಶ ನೀಡಲಾಗುವುದು ಎಂದ ಅವರು 4ನೇ ಬ್ಯಾಚ್ ನಲ್ಲಿ ದೇವದಾಸಿಯರ ಮಕ್ಕಳಿಗೆ ತರಬೇತಿ ನೀಡುತ್ತೇವೆ ಎಂದರು.
ಯುವಕರು ಪ್ರಸ್ತುತ ಉದ್ಯೋಗ ಸಿಗದೇ ತೊಂದರೆ ಅನುಭವಿಸುತ್ತಿದ್ದು, ಅಂತಹ ಯುವಕರಿಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ಉಚಿತ ಉದ್ಯಮಶೀಲತಾ ತರಬೇತಿಯೂ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ತಹಶೀಲ್ದಾರ್ ಡಿ.ಹೆಚ್. ಹೂಗಾರ್, ತಾಲೂಕು ಅಭಿವೃದ್ಧಿ ಅಧಿಕಾರಿ ಉಮೇಶ್ ಸಿದ್ನಾಳ್, ಕಾಕತಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಿದ್ದು ಸುಣಗಾರ, ಹೆಬ್ಬಾಳ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಮಹಾಂತೇಶ ಮಗದುಮ, ಕಿರಣ ರಜಪೂತ, ಪಾಂಡು ಮನ್ನಿಕೇರಿ, ಫಜಲ್ ಮಕಾನದಾರ, ದಯಾನಂದ ಪಾಟೀಲ, ಎಸ್.ಜೆ. ಪತ್ತಾರ, ಮಲಗೌಡ ಪಾಟೀಲ, ಈರಣ್ಣಾ ಬಿಸಿರೊಟ್ಟಿ ಸೇರಿದಂತೆ ಇತರರು ಇದ್ದರು.