ಗೋಕಾಕ: ಸಚಿವ ಈಶ್ವರಪ್ಪ ಹೇಳಿಕೆಯಿಂದ ರಾಜ್ಯದಲ್ಲಿಸಮಸ್ಯೆ ಉದ್ಭವಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ ಬಿಜೆಪಿ ಸೃಷ್ಟಿ ಮಾಡಿದ ವಿವಾದ, ಹಿಜಾಬ್ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದು, ಮೊದಲು ಯಾವ ಕಷ್ಟಗಳು ಬಂದಿರಲಿಲ್ಲ. ಈಗ ಉದ್ದೇಶ ಪೂರ್ವಕವಾಗಿ ಬಿಜೆಪಿ ಮಾಡಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಸ್ವತಂತ್ರ್ಯ ನೀಡಿದ್ದು, ಅವರ ಪಾಡಿಗೆ ಆ ಪದ್ದತಿ ನಡೆಸಲು ಬೀಡಬೇಕು ಎಂದರು.
ಸದ್ಯ ಪಂಚರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಮತದಾರರು ಕೈಗೆ ಹೆಚ್ಚಿನ ಒಲವು ತೋರಿದ್ದು, ಈ ಭಾರಿ ಪಂಚರಾಜ್ಯ ಫಲಿತಾಂಶದಲ್ಲಿ ಕಾಂಗ್ರೆಸ್ ಗೆಲುವಿನ ಕೇಕೆ ಹಾಕಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಗೋವಾದಲ್ಲಿ ಕನ್ನಡಿಗರು, ಗೋವಾ ರಾಜ್ಯದ ಮತದಾರರು ಬಿಜೆಪಿ ದುರಾಡಳಿತಕ್ಕೆ ಬೇಸತ್ತಿದ್ದು, ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಬರಬೇಕೆಂದುಕೈಗೆ ಬೆಂಬಲಿಸಿದ್ದಾರೆ. ಬಿಜೆಪಿ ಸರ್ಕಾರ ೪ನೇ ಬಜೆಟ್ ಮಂಡನೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಉತ್ತರ ಕರ್ನಾಟಕ ಹಾಗೂ ಬೆಳಗಾವಿ ಜಿಲ್ಲೆ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮಿಸಲಿಡಬೇಕು ಎಂದರು.
ಸರ್ಕಾರ ಕೂಡಾ ಉತ್ತಮವಾದ ಸಿದ್ಧತೆ ಮಾಡಿಕೊಂಡು ನೀರಾವರಿ ಸೇರಿದಂತೆ ಅನೇಕ ಯೋಜನೆಗಳು ಜಾರಿಗೆ ತರಲು ಮುಂದಾಗಬೇಕು. ಪ್ರತಿ ಭಾರಿ ಉತ್ತರ ಕರ್ನಾಟಕ್ಕೆ ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ನೀರಾವರಿ ಸಮಸ್ಯೆ ಹೆಚ್ಚಾಗಿದ್ದು, ಈ ಸಮಸ್ಯೆ ಬಗೆಹರಿಸಲು ನಮ್ಮ ಪಕ್ಷದ ವರಿಷ್ಠರ ಗಮನಕ್ಕೆ ತಂದು ನ್ಯಾಯ ಒದಗಿಸಲಾಗುವುದು ಎಂದರು.
ಯಮಕನಮರಡಿ ಹಾಗೂ ಗೋಕಾಕ ಕ್ಷೇತದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಅನೇಕ ಹೊಸ ಹೊಸ ಕೆಲಸಗಳನ್ನು ಮಾಡಲಾಗುತ್ತಿದೆ. ಇದರ ಸದಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದರು.