ಬೆಳಗಾವಿ : ‘ ಸಂವಿಧಾನ ಪಾಲನೆ ಹಾಗೂ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈಗಾಗಲೇ ಸಂವಿಧಾನದ ಬಗ್ಗೆ ಸಂಪೂರ್ಣ ಅರಿವು ಮೂಡಿಸುವ ಕಾರ್ಯ ನಡೆದಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ 71ನೇ ಸಂವಿಧಾನದ ಸಮರ್ಪಣಾ ದಿನಾಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈಗಾಗಲೇ ಘಟಪ್ರಭಾ ಸೇವಾದಳ ಕೇಂದ್ರದಲ್ಲಿ ಹಾಗೂ ಕಾಂಗ್ರೆಸ್ ಭವನದಲ್ಲಿ ನಿರಂತರ ತರಬೇತಿಗಳನ್ನು ನಡೆಸಲಾಗುತ್ತಿದೆ. ಜನರು ಸಹ ಇದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು’ ಎಂದರು.
‘ ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಅದನ್ನು ಗೌರವಿಸುವ ಮೂಲಕ ರಕ್ಷಣೆ ಮಾಡಬೇಕಿದೆ. ಸಂವಿಧಾನದಿಂದಲೇ ದೇಶದಲ್ಲಿ ನೂರಾರು ಜಾತಿ, ಭಾಷೆ, ಧರ್ಮಗಳಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿದ್ದೇವೆ. ಸಂವಿಧಾನದಿಂದಲೇ ಭಾರತ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ಆಗಿದೆ ‘ ಎಂದರು.
ಸಂವಿಧಾನದ ಮಹತ್ವ ಮತ್ತು ಸಂವಿಧಾನದ ರಕ್ಷಣೆಯ ಕುರಿತು ಬಾಗಲಕೋಟೆಯ ಕಾಂಗ್ರೆಸ್ ಮುಖಂಡ ಸಂತೋಷ ಬಗಲಿ ದೇಸಾಯಿ, ಹಿರಿಯ ವಕೀಲ ಮಹಾನಂದ ಪಾಟೀಲ ಉಪನ್ಯಾಸ ನೀಡುವ ಮೂಲಕ 71ನೇ ಸಂವಿಧಾನದ ಸಮರ್ಪಣಾ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರಾಧ್ಯಕ್ಷ ರಾಜು ಸೇಠ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.