ಬೆಳಗಾವಿ: ಕನ್ನಡ ಸಾಹಿತ್ಯದ ಹಿರಿಯ ಚೇತನ, ಸೌಹಾರ್ದತೆಯನ್ನು ಸಾರುತ್ತಾ ಸಮನ್ವಯ ಕವಿ ಎಂದೇ ಖ್ಯಾತರಾಗಿದ್ದ ಕವಿ ಚೆನ್ನವೀರ ಕಣವಿ ಅವರ ನಿಧನದಿಂದ ಅತೀವ ದು:ಖವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
‘ಕನ್ನಡದ ಸಾಹಿತ್ಯ ಲೋಕದ ನಕ್ಷತ್ರದಂತಿದ್ದ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಬಹು ದೊಡ್ಡ ನಷ್ಟ ಎಂದು ಅವರು ಹೇಳಿದ್ದಾರೆ.
ವಿಮರ್ಶೆಗಳ ಜತೆಗೆ ಕಾವ್ಯಗಳು, ಸುನೀತಗಳನ್ನು ಬರೆಯುತ್ತಿದ್ದ ಕಣವಿ ಅವರು ಕಾವ್ಯಾಕ್ಷಿ, ಆಕಾಶಬುಟ್ಟಿ, ಹೊಂಬೆಳಕು, ನೆಲ ಮುಗಿಲು ಸೇರಿದಂತೆ ಹತ್ತು ಹಲವು ಕಾವ್ಯ ಸಂಕಲನ ರಚಿಸಿದ್ದಾರೆ.
1996ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕಣವಿ ಅವರು ಸಾಹಿತ್ಯ ಲೋಕದಲ್ಲಿ ಸಲ್ಲಿಸಿದ್ದ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ,ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ಅವರ ಮುಕುಟ ಅಲಂಕರಿಸಿದ್ದವು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಸ್ಮರಿಸಿದ್ದಾರೆ.
ಕಣವಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು, ಬಂಧುಗಳು ಹಾಗೂ ಸಾಹಿತ್ಯ ಅಭಿಮಾನಿಗಳಿಗೆ ಅವರ ಅಗಲಿಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಶಾಸಕ ಸತೀಶ್ ಜಾರಕಿಹೊಳಿ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.