ಗೋಕಾಕ: ಭಾರತದ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಕೊಡುಗೆ ಅಮೂಲ್ಯವಾದದ್ದು ಎಂದು ಯುವ ನಾಯಕಿ ಪ್ರಿಯಾಂಕ ಜಾರಕಿಹೊಳಿ ಹೇಳಿದರು.
ನಗರದ ಹಿಲ್ಲ್ ಗಾರ್ಡನ್ ಕಚೇರಿ ಎದುರು 73ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಾಮಾಜಿಕ ಸುಧಾರಕ, ಶಿಕ್ಷಣ ತಜ್ಞ, ನ್ಯಾಯಶಾಸ್ತ್ರಜ್ಞ, ರಾಜಕಾರಣಿ ಮತ್ತು ಕಾನೂನು ತಜ್ಞರಾಗಿ ದೇಶದ ಸಂವಿಧಾನಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಕೊಡುಗೆ ಅಪಾರ. ಸಮಾಜ, ಜಾತಿ ಮತ್ತು ಸಮುದಾಯಗಳ ಬಗೆಗಿನ ಅವರ ಆಲೋಚನೆಗಳು ರಾಜಕೀಯ ಗಡಿಗಳನ್ನು ಮೀರಿದ್ದಾಗಿದೆ ಎಂದರು.
ಭಾರತ ದೇಶದಲ್ಲಿ ಅಧಿಕೃತವಾಗಿ ಸಂವಿಧಾನ ಜಾರಿಗೆ ಬಂದಿದ್ದು, 1950ರ ಜನವರಿ 26ರಂದು. ಅಂದಿನಿಂದಲೂ ಪ್ರತಿವರ್ಷ ಜನವರಿ 26ರನ್ನು ಗಣರಾಜ್ಯೋತ್ಸವ ಅಥವಾ ಗಣತಂತ್ರ ದಿನ ಎಂದು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ದೇಶದಲ್ಲಿ 1949ರ ನವೆಂಬರ್ 26ರಂದು ಸಂವಿಧಾನ ಸಭೆಯಲ್ಲಿ, ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತಿವರ್ಷ ನವೆಂಬರ್ 26ನ್ನು ಸಂವಿಧಾನ ದಿನವೆಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಭಾರತ ಸ್ವತಂತ್ರಗೊಂಡು, ತನ್ನದೇ ಅಸ್ತಿತ್ವ, ಗುರುತು ರೂಪಿಸಿಕೊಂಡಿದ್ದನ್ನು ಈ ಗಣರಾಜ್ಯೋತ್ಸವ ಸಾರುತ್ತದೆ. ಅಷ್ಟೇ ಅಲ್ಲ, ಪ್ರಜಾಸತ್ತಾತ್ಮಕವಾಗಿ ತಮ್ಮ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವ ಶಕ್ತಿಯನ್ನು ನಾಗರಿಕರಿಗೆ ನೀಡಿದ ದಿನವನ್ನು ಗಣರಾಜ್ಯೋತ್ಸವ ಸ್ಮರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಠ್ಠಲ ಪರ್ಸನ್ನವರ್, ವಿನೋದ ಡೊಂಗರೆ, ಪಾಂಡು ರಂಗಸುಬೆ, ಎ.ಬಿ ಖಾಜಿ, ಭರ್ಮಣ್ಣ ತೋಳಿ, ಸುರೇಶ್ ಸೇರಿದಂತೆ ಹಿಲ್ಲ್ ಗಾರ್ಡನ್ ಸಿಬ್ಬಂದಿ ಉಪಸ್ಥಿತರಿದ್ದರು.