ಚಿಕ್ಕೋಡಿ ಹಾಗೂ ಗೋಕಾಕ ಹೊಸ ಜಿಲ್ಲೆ ರಚನೆಯಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಭಿವೃದ್ದಿ ನಿಟ್ಟಿನಲ್ಲಿ 18 ಶಾಸಕರನ್ನು ಹೊಂದಿರುವ ದೊಡ್ಡ ಜಿಲ್ಲೆ ಬೆಳಗಾವಿ ವಿಭಜನೆಯಾಗುವುದು ಅನಿವಾರ್ಯ. ಜಿಲ್ಲೆ ವಿಭಜನೆ ಬಗ್ಗೆ ಮೊದಲಿನಿಂದಲೂ ನಾವು ಆ ಕುರಿತು ಪ್ರತಿಪಾದಿಸುತ್ತ ಬಂದಿರುವುದಾಗಿ ಹೇಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಕುರಿತು ತಮ್ಮ ಹೆಸರು ಕೇಳಿ ಬರುತ್ತಿರುವ ಬಗ್ಗೆ ಉತ್ತರ ನೀಡಿದ ಅವರು, ಸ್ಪರ್ಧೆಗೆ ವೈಯಕ್ತಿಕವಾಗಿ ನನಗೆ ಆಸಕ್ತಿ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಯಾರಾಗಬಹುದು ಎಂಬ ಬಗ್ಗೆ ಡಿಸೆಂಬರ್ ವಾರದಲ್ಲಿ ಚರ್ಚಿಸಲಾಗುವುದು. ಮೂವರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗುವುದು. ಆದರೆ, ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆ ಇಲ್ಲ. ಮಸ್ಕಿ ವಿಧಾನ ಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ ಎಂದು ಭವಿಷ್ಯ ನುಡಿದರು.
ನಿಗಮ ಮಂಡಳಿ ನೇಮಕ ಮಾಡಲಿ. ಪ್ರಾಧಿಕಾರ ರಚಿಸಲಿ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಇದನ್ನು ಬಜೆಟ್ ನಲ್ಲಿ ಘೋಷಿಸಬೇಕಿತ್ತು ಎಂದು ಹೇಳಿದರು.