ಯಮಕನಮರಡಿ: ಮುಸ್ಲಿಂ ಸಮಾಜ ಬಾಂಧವರ ಮಕ್ಕಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡುವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.ಪಟ್ಟಣದಲ್ಲಿ ನಿರ್ಮಿಸಿದ ನೂತನ ಶಾದಿ ಮಹಲ್ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮತಕ್ಷೇತ್ರದಲ್ಲಿಅನೇಕ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಶಾದಿ ಮಹಲ್ ಗಳನ್ನು ನಿರ್ಮಿಸಲಾಗಿದೆ. ಇವುಗಳನ್ನುಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಯಮಕನಮರಡಿಯಲ್ಲಿ ಶಾದಿ ಮಹಲ್ ನಿರ್ಮಿಸಬೇಕು ಎಂದು ಮುಸ್ಲಿಂ ಬಾಂಧವರ ಬೇಡಿಕೆಯಾಗಿತ್ತು. ಅನುದಾನ ಕೊರತೆಯಿಂದ ಶಾದಿ ಮಹಲ್ ಕಟ್ಟಡ ನಿರ್ಮಾಣ ಕಾರ್ಯ ವಿಳಂಬವಾಯಿತು. ಆದರೆ ಇಂದು ನಿಮ್ಮ ಬೇಡಿಕೆ ಈಡೇರಿದೆ. ಈ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಮಟ್ಟದ ಅಧಿಕಾರಿಗಳು, ಮುಖಂಡರು ಸಹಕಾರ ನೀಡಿದ್ದಾರೆ ಎಂದರು.
ಇನ್ನೂ ಅನೇಕ ಗ್ರಾಮಗಳಲ್ಲಿ ಸಮುದಾಯ ಭವನ, ಶಾದಿ ಮಹಲ್ ಗಳನ್ನು ನಿರ್ಮಾಣ ಮಾಡಲಾಗುವುದು. ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗಿದ್ದು, ಶಿಕ್ಷಣ ಕ್ಷೇತ್ರಕ್ಕೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಘಟಪ್ರಭಾ ನದಿಗೆ ಬ್ಯಾರೇಜ್ ನಿರ್ಮಾಣ ಸೇರಿದಂತೆ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ ಎಂದರು.
ಕ್ಷೇತ್ರದಲ್ಲಿ ಇನ್ನೂ ಏನಾದರೂ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ. ಅವುಗಳಿಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ಮೂಲಕ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದ ಅವರು, ನಿಮ್ಮ ಸಹಕಾರದಿಂದ ಆಯ್ಕೆಯಾದ ವಿಧಾನ್ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಕೂಡ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬದ್ಧರಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಹಾಜಿ ಶರೀಫ್ ಇಮಾಮಸಾಬ ಬೇಪಾರಿ ಮಾತನಾಡಿ, ನೂತನ ಶಾದಿ ಮಹಲ್ ಕಟ್ಟಡಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹೆಸರು ನಾಮಕರಣ ಮಾಡೋಣ ಎಂದು ಸಮಾಜದ ಮುಖಂಡರಿಗೆ ವಿನಂತಿಸಿದರು.
ಶ್ರೀ. ಮ.ನಿ.ಪ್ರ.ಸ್ವ. ರಾಚೋಟಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎ.ಬಿ. ಪಾಟೀಲ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಹಾಜಿ ಶರೀಪ ಇ. ಬೇಪಾರಿ, ಮೌಲಾನ ಹಾರುಣಸಾಬ ಶಾಹೀ ಮಜಹಿರಿ, ವೀರಣ್ಣ ತುಬಚಿ, ಕಿರಣಸಿಂಗ ಬಾ. ರಜಪೂತ, ರವೀಂದ್ರ ಜಿಂಡ್ರಾಳಿ, ಶೌಕತ ಅಲಿ ಮಹಮ್ಮದ್ ಹುಸೇನ್ ಖಾಜಿ ಸೇರಿದಂತೆ ಇತರರು ಇದ್ದರು.