ರಾಯಬಾಗ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವಂತ ಪ್ರಯತ್ನ ಮಾಡಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು. ಅವುಗಳೇ ಚುನಾವಣೆ ಗೆಲ್ಲಲು ನಮಗೆ ಶ್ರೀರಕ್ಷೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಡಿ.27ರಂದು ನಡೆಯುವ ತಾಲ್ಲೂಕಿನ ಚಿಂಚಲಿ, ಹಾರೋಗರಿ ಪಟ್ಟಣ ಪಂಚಾಯ್ತಿ ಚುನಾವಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯನ್ನು ಉದ್ದೇಶೀಸಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3ರಿಂದ 4 ಲಕ್ಷ ಮನೆಗಳನ್ನು ನೀಡಿದ ಉದಾಹರಣೆಗಳು ಇವೆ. ಆದರೆ ಬಿಜೆಪಿ ಸರ್ಕಾರ ಒಂದೇ ಒಂದು ಮನೆ ನೀಡಿಲ್ಲ ಎಂದರು.
ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಚುನಾವಣೆಯಲ್ಲಿ ಯಾರನ್ನು ನಿರ್ಲಕ್ಷ್ಯ ಮಾಡುವ ಮಾತಿಲ್ಲ. ಒಂದು ಮತವೂ ಸಹ ಮುಖ್ಯವಾಗಲಿದೆ. ಈ ಎಲೆಕ್ಷನ್ ಮುಂದಿನ ವಿಧಾನಸಭೆ ಚುನಾವಣೆಯ ಗೆಲುವಿನ ಎರಡನೇ ಮೆಟ್ಟಿಲಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಡೆದ ಉಪಚುನಾವಣೆ, ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಭಾವುಟ ಹಾರಲು ನಿಮ್ಮ ಸಹಕಾರ, ಸಹಾಯವೇ ಕಾರಣ. ಅದೇ ರೀತಿ ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸಗೆ ಮತ ನೀಡಿ ಗೆಲ್ಲಿಸಿ, ಮುಂಬರುವ 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಹಕಾರಿಯಾಗಲಿದೆಯಂದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಚಿಂಚಲಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ಸ್ಪರ್ಧೆ ಮಾಡಿರುವ 18 ಜನರಿಗೆ ಮಾಯಕ್ಕದೇವಿಯ ಆಶೀರ್ವಾದ ಇರಲಿ. ನೀವು ಸಹ ಮತ ನೀಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯ ಶಕ್ತಿ ಹೆಚ್ಚಿಸೋಣ ಎಂದರು.
ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಚಿಂಗಳೆ, ರಾಯಬಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಬ್ ಕುಲಗುಡೆ, ಮಹಾವೀರ ಮೋಹಿತೆ, ಸಂಜೀವ ಬಾನೆ, ಶಂಕರಗೌಡ ಪಾಟೀಲ, ರಾಜು ಶಿರಗಾಂವೆ, ಧುಳಗೌಡ ಪಾಟೀಲ, ಪ್ರವೀಣ ಹುಕ್ಕೇರಿ, ಶಿವಾಜಿ ಸೌಂದಲಗಿ, ವಿವೇಕ ಹಟ್ಟಿಕರ, ರಾಜು ಕೊಟಗಿ, ಬಾಪುಸಾಬ ಪಾಟೀಲ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.