ಬೆಳಗಾವಿ : ಹುಕ್ಕೇರಿ ತಾಲ್ಲೂಕಿನ ಕರಗುಪ್ಪಿ ಗ್ರಾಮದಲ್ಲಿ ಬಸವಣ್ಣ ದೇವರ ಕಾರ್ತಿಕೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಜೋಡೆತ್ತಿನ ಖಾಲಿ ಗಾಡಾ ಸ್ಪರ್ಧೆಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಚಾಲನೆ ನೀಡಿದರು.
ಕುಂದರಗಿಯ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಡಿಸೆಂಬರ್ 22ರಿಂದ 25ರವೆಗೆ ಕಾರ್ತಿಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನವೂ ವಿವಿಧ ಸ್ಪರ್ಧೆಗಳಾದ ಜೋಡು ಎತ್ತಿನ ಖಾಲಿ ಗಾಡಾ ಓಡಿಸುವ , ಟಗರು ಕಾಳಗ, ರಂಗೋಲಿ ಸ್ಪರ್ಧೆ, ಸ್ಲೋ ಸೈಕಲ್ ಸ್ಪರ್ಧೆ, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇಂದು ನಡೆದ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಪರ್ಧೆಗೆ ರಾಹುಲ್ ಜಾರಕಿಹೊಳಿ ಚಾಲನೆ ನೀಡಿದರು. ಚಾಲನೆ ನೀಡುತ್ತಿದ್ದಂತೆ ಬಿರುಗಾಳಿಯ ರಭಸದಂತೆ ಓಡುತ್ತಿದ್ದ ಎತ್ತುಗಳ ಓಟ ನೆರೆದಿದ್ದ ಪ್ರೇಕ್ಷಕರ ಮೈ ರೋಮಾಂಚನ ಗೊಳಿಸುತ್ತಿತ್ತು.
ಈ ಮೊದಲು ರಾಹುಲ್ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಪೋಷಿಸುವ ಉದ್ದೇಶದಿಂದ ಜೋಡೆತ್ತು ಗಾಡಾ ಓಡಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತದೆ. ರೈತರಿಗೆ ಈ ತರಹ ಸ್ಪರ್ಧೆಗಳೇ ಖುಷಿ ದಿನಗಳಾಗಿರುತ್ತದೆ. ಗ್ರಾಮಸ್ಥರು ಪ್ರತಿ ವರ್ಷ ಸ್ಪರ್ಧೆಗಳನ್ನು ಏರ್ಪಡಿಸಬೇಕು ಎಂದರು. ಈ ಸಂದರ್ಭದಲ್ಲಿ ಮಾರುತಿ ಬೆನಕೋಳಿ, ಮಾರುತಿ ಕುಂದ್ರಿ, ಆನಂದ ಚೌಗಲಾ, ಮಲ್ಲಿಕಜಾನ್ ದೇಸಾಯಿ ಸೇರಿದಂತೆ ಗ್ರಾಮಸ್ಥರು ಇದ್ದರು.