ಬೆಳಗಾವಿ: ನಿರುದ್ಯೋಗ ಬಗ್ಗೆ ದೇಶ, ರಾಜ್ಯದಲ್ಲಿ ಪ್ರಸ್ತುತ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿಸಾಕಷ್ಟು ಸಮಸ್ಯೆಗಳು ಇವೆ, ಅವುಗಳ ಬಗ್ಗೆ ಕೂಡ ಹೋರಾಟ ನಡೆಸಬೇಕು ಎಂದರು.
ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅವುಗಳ ಭರ್ತಿಗೆ ಹೋರಾಟ ನಡೆಸಿ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಜಾಗೃತಿ ಮೂಡಸಬೇಕಿದೆ ಎಂದು ತಿಳಿಸಿದರು.
ಈ ಹೋರಾಟ ಬೆಳಗಾವಿಗೆ ಸೀಮಿತವಾಗದೆ ದೇಶ, ರಾಜ್ಯ ಮತ್ತು ತಾಲೂಕು ಮಟ್ಟದಲ್ಲಿ ಕೂಡ ನಡೆಯಬೇಕು. ಯುವ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಕೂಡ ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ 2 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಇವತ್ತು 2 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಸಿಲ್ಲಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದ ಯುವ ಜನತೆಗೆ ಉದ್ಯೋಗ ನೀಡಿ, ಇಲ್ಲವೇ 9 ಸಾವಿರ ರೂ. ನಿರುದ್ಯೋಗ ಭತ್ಯೆ ಕೊಡಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿಯಾಗಿದೆ. ರಾಜ್ಯದಲ್ಲಿ ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆ ನೀಡಿ. ನಮ್ಮ ಹೋರಾಟ ಇತಿಹಾಸವಾಗಲಿದೆ. ನಾನು ನಾಲ್ಕು ಹೆಜ್ಜೆ ಹಾಕಿ ತೆರಳುತ್ತೇನೆ ಎಂದು ತಿಳಿಸಿದರು.
ನಿನ್ನೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿತ್ತು. ಕಾಮಗಾರಿಯ ಬಿಲ್ ಮಾಡೋದಕ್ಕೆ ಪರ್ಸಂಟೇಜ್ ತೆಗೆದುಕೊಳ್ಳುವ ಸರ್ಕಾರದ ವಿರುದ್ಧ ಟ್ರ್ಯಾಕ್ಟರ್ ರಾಲಿ ನಡೆಸಿ, ಆಕ್ರೋಶ ವ್ಯಕ್ತ ಪಡಿಸಿದ್ದರು. ಇಂದು ಮತ್ತೆ ಪ್ರತಿಭಟನೆ ಮುಂದುವರೆಸಿರುವ ಕಾಂಗ್ರೆಸ್ ಯುವ ನಾಯಕರು, ಯುವಕರಿಗೆ ಉದ್ಯೋಗ ಆದ್ಯತೆ, ಬೆಲೆ ಏರಿಕೆ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಯಡಿಯೂರಪ್ಪ ಮಾರ್ಗದಿಂದ ಪಾದಯಾತ್ರೆ ಶುರು ಮಾಡಿದ ಯುವ ಕಾಂಗ್ರೆಸ್ ಮುಖಂಡರು, ಬೆಳಗಾವಿ ಸುವರ್ಣ ಸೌಧದವರೆಗೆ ಬೃಹತ್ ಪಾದಯಾತ್ರೆ ನಡೆಸಿದರು.
ಪಾದಯಾತ್ರೆಯಲ್ಲಿಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ನಲಪಾಡ್ ಹ್ಯಾರಿಸ್ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು.