ಉಡುಪಿ : ದಕ್ಷಿಣ ಕನ್ನಡ ಜಿಲ್ಲೆಯನ್ನ ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮರು ಸ್ಥಾಪಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಂಗಳೂರು, ಉಡುಪಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಆ ಕೋಟೆಯನ್ನು ಮತ್ತೊಮ್ಮೆ ಭದ್ರಕೋಟೆಯನ್ನಾಗಿ ಮರು ಸ್ಥಾಪಿಸುವ ಕಾಲ ಸನ್ನದವಾಗಿದೆ ಎಂದರು.
ಕಾಂಗ್ರೆಸ್ ಪಕ್ಷವನ್ನು ಕೇಡರ್ ಮಾದರಿಯಲ್ಲಿ ಒಗ್ಗಟ್ಟಾಗಿ ಬೂತ್ ಮಟ್ಟದಿಂದ ಸಂಘಟಿಸಲು ಈಗಾಗಲೇ ರಾಜ್ಯಾದ್ಯಂತ ಕಾರ್ಯ ತಂತ್ರಗಳನ್ನು ರೂಪಿಸಲಾಗಿದೆ. ಕಾರ್ಯಕರ್ತರು ಸಹ ಹೆಚ್ಚು ಸಮಯವನ್ನು ಪಕ್ಷ ಸಂಘಟನೆಗೆ ಮೀಸಲಿಟ್ಟು ಕಾರ್ಯ ಮಾಡಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಸದಾ ಸಿದ್ದನಾಗಿದ್ದೇನೆ. ಕಾರ್ಯಕರ್ತರು ಸಹ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸಲು ನನ್ನ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಮೊದಲು ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೋಡವೂರ, ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹನಮಣ್ಣವರ , ಮೆರೋಜ್ ಖಾನ್, ಮಾಜಿ ಸಚಿವ ವಿನಯಕುಮಾರ್ ಸೊಳಂಕಿ, ಗೋಪಾಲ ಪೂಜಾರಿ, ಪಿ.ಮೋಹನ್ , ಸ್ಥಳೀಯ ನಾಯಕರು , ಉಡುಪಿ ಜಿಲ್ಲೆಯ ಬ್ಲಾಕ್ ಅಧ್ಯಕ್ಷರು ಇದ್ದರು.