ಬೆಳಗಾವಿ : ಪ್ರತಿ ವರ್ಷ ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದಂದು ಮಾನವ ಬಂಧುತ್ವ ವೇದಿಕೆ ನಡೆಸುವ ಮೌಢ್ಯ ವಿರೋಧಿ ದಿನವನ್ನು ಡಿಸೆಂಬರ್ 6ರಂದು ಯುವ ನಾಯಕ ರಾಹುಲ್ ಜಾರಕಿಹೊಳಿ ನೇತೃತ್ವದಲ್ಲಿ ಆಚರಿಸಲಾಗುತ್ತಿದೆ.
ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿ ಮೌಢ್ಯ ವಿರೋಧಿ ದಿನವನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಾಗೂ ಕೋವಿಡ್ ನಿಯಮಾವಳಿಯ ಮಿತಿ ಇರುವ ಕಾರಣ, ಆ ಮಿತಿ ಮೀರದಂತೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ.
ಮೌಢ್ಯ ವಿರೋಧಿ ದಿನವನ್ನು ಬೆಳಗಾವಿ ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಡಿ.6ರಂದು ಆಚರಿಸಲಾಗುತ್ತಿದ್ದು, ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಈ ಸಂಪೂರ್ಣ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಣೆ ಮಾಡಬಹುದಾಗಿದೆ.
ನಮ್ಮ ದೇಶದ ಜನರು ಆಚರಿಸುವ ಮೌಢ್ಯಾಚರಣೆ ವಿರುದ್ದ ಸಮರ ಸಾರಿದವರು ಡಾ.ಬಿ ಆರ್ ಅಂಬೇಡ್ಕರ್. ಭಾರತದಲ್ಲಿನ ಅನೇಕ, ಶೋಷಣೆ, ಮೌಢ್ಯಗಳನ್ನ ವಿರೋಧಿಸಿ ಕಾನೂನು ರಚಿಸಿ, ಶಿಕ್ಷಣದ ಮೂಲಕ ಸರ್ವರಿಗೂ ಸಮಪಾಲು ಸಿಗಲಿ ಅನ್ನೋ ಮಹತ್ತರ ಆಶಯವನ್ನ ಹೊಂದಿದ್ದವರು.
ಇಂತಹ ಮಹಾನ್ ಚೇತನ ನಮ್ಮನ್ನಗಲಿದ ದಿನ ಡಿ. 6. ಬಾಬಾ ಸಾಹೇಬರ ಪರಿನಿರ್ವಾಣ ದಿನವನ್ನ ಅವರ ಆಶಯಗಳನ್ನ ಜನರಿಗೆ ತಿಳಿಸಲು, ಜಾಗೃತಿ ಮೂಡಿಸಲು, ಮೌಡ್ಯವನ್ನ ತೊಲಗಿಸಲು ಮಾನವ ಬಂದುತ್ವ ವೇದಿಕೆ ಸ್ಮಶಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಕಾರ್ಯಕ್ರಮ ಆಚರಿಸಲಾಗುತ್ತಿದೆ.
ಪ್ರತಿ ವರ್ಷದಂತೆ ಬುದ್ಧ, ಬಸವ, ಅಂಬೇಡ್ಕರ್ ಅವರ ಪ್ರಬುದ್ಧ ಸಮಾಜದ ಆಶಯದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.