ಗೋಕಾಕ : ” ಯಾರು ಏನೇ ಹೇಳಿದ್ರು ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಅಲುಗಾಡದಿರಿ. ಕೈ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ತಮ್ಮ ಮೇಲಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ ಮತಕ್ಷೇತ್ರ ಖನಗಾಂವ, ಬೈಲಹೊಂಗಲ ಕ್ಷೇತ್ರದ ನೇಸರಗಿ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಚುನಾಯಿತ ಪ್ರತಿನಿಧಿಗಳ ಹಾಗೂ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದರು.
ಡಿ.10ಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳಿಂದ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಆದ್ದರಿಂದ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಬೇಕೆಂದು ಮನವಿ ಮಾಡಿದರು.
” ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವು ಪಕ್ಷಕ್ಕೆ ಬಲಬಂದಂತೆ. ಎರಡ್ಮೂರು ತಿಂಗಳಲ್ಲಿ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ಕೂಡಾ ಬರಲಿವೆ. ಬಳಿಕ ಒಂದು ವರ್ಷ ಕಳದ್ರೆ ವಿಧಾನಸಭೆ ಚುನಾವಣೆ ಮತ್ತೆ ಬರಲಿದೆ. ಆದ್ದರಿಂದ ನಾವೇಲ್ಲ ಗಟ್ಟಿಯಾಗಿ ನಿಂತೂ ಕೈ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ” ಎಂದು ತಿಳಿಸಿದರು.
” ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಬೇಕಿರುವ ಮತಗಳು ಇವೆ. ಆದರೆ ಕಾಂಗ್ರೆಸ್ ಮುಂದಿನ ಚುನಾವಣೆಗೆ ಬಲ ಬರಬೇಕಾದರೆ ಕೈ ಅಭ್ಯರ್ಥಿ ಬಹುಮತಗಳ ಅಂತರದಿಂದ ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ತಾವು ತಮ್ಮ ಮತವನ್ನು ಚನ್ನರಾಜ್ ಹಟ್ಟಿಹೊಳಿ ಅವರಿಗೆ ನೀಡಬೇಕು ಎಂದರು.
” ಪಕ್ಷೇತರ ಅಭ್ಯರ್ಥಿ ಹಾಗೂ ಬಿಜೆಪಿ ದೂರವಿಟ್ಟು ಕಾಂಗ್ರೆಸ್ ಗೆ ಮತ ನೀಡಬೇಕೆಂಬುವುದು ನಿಮ್ಮ ಗುರಿಯಾಗಬೇಕು. ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ದೊಡ್ಡ ತಲೆ ನೋವಾಗಿದೆ. ನೇಸರಗಿಗೆ ಗೋಕಾಕ ಸಮೀಪ ಇರುವುದರಿಂದ ಹುಷಾರಾಗಿ ಇರಬೇಕು. ಏಕೆಂದರೆ ಎದುರಾಳಿಗಳು ಸಹ ಬಂದು ಸೆಳೆಯುತ್ತಾರೆ” ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮುಖಂಡರಾದ ಬಾಬಾಸಾಹೇಬ್ ಪಾಟೀಲ, ಶಂಕರ ಗಿಡ್ಡನ್ನವರ, ನಿಂಗಪ್ಪ, ಮುಖಂಡರು, ಕಾರ್ಯಕರ್ತರು ಇದ್ದರು.