ಹುಕ್ಕೇರಿ : ‘ ಕಾಂಗ್ರೆಸ್ ಸರ್ಕಾರದ ಅನೇಕ ಯೋಜನೆಗಳನ್ನು ಈಗಿನ ಸರ್ಕಾರ ಸ್ಥಗಿತಗೊಳಿಸಿದೆ. ಇದು ಬಿಜೆಪಿ ಸರ್ಕಾರದ ಕಾರ್ಯವೈಕರಿಯಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಇಲ್ಲಿನ ವಿಜಯ ರವದಿ ಸಮಾಜ ಸೇವಾ ಸಂಸ್ಥೆ ಸಭಾ ಭವನದಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಭಾಗದಲ್ಲಿ ಶೈಕ್ಷಣಿಕ, ನೀರಾವರಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಿಕ್ಕೆ ಬಂದರೆ ಬಡವರ ಪರ ಕೆಲಸವನ್ನು ಮಾಡುತ್ತದೆ ಎಂದರು.
ಕಾಂಗ್ರೆಸ್ ಬಡವರ ಪರ ಸರ್ಕಾರ ಎಂಬುವ ಹೆಮ್ಮೆ ನಮಗಿದೆ. ಈ ನಿಟ್ಟಿನಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿಗೆ ಮತದಾರರು ಆಶೀರ್ವಾದ ಮಾಡಬೇಕು. ಅವರು ಸಹ ಹೆಚ್ಚಿನ ಕೆಲಸ ಮಾಡಬೇಕೆಂಬ ಉತ್ಸಾಹ ಹೊಂದಿದವರಾಗಿದ್ದಾರೆ ಎಂದು ಹೇಳಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರನ್ನು ಗೆಲ್ಲಿಸುವುದು ನಮ್ಮ ಮುಂದಿರುವ ಸವಾಲು. ಅವರನ್ನು ಗೆಲ್ಲಿಸುವಂತಹ ಶಕ್ತಿ ನಮ್ಮಲಿ ಇದೆ. ಆತಂಕ ಪಡುವ ಅವಶ್ಯಕತೆ ಇಲ್ಲ. ಮತದಾರರು ಗೆಲ್ಲಿಸಲು ಶ್ರಮೀಸಬೇಕೆಂದು ಮನವಿ ಮಾಡಿದರು.
ರಾಜ್ಯದ ವಿವಿಧ ಕಡೆಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಈ ಚುನಾವಣೆಯು 2023ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವು ಯುವ ಉತ್ಸಾಹಿ ಹಾಗೂ ಹೊಸ ಮುಖ ಚನ್ನರಾಜ ಹಟ್ಟಿಹೊಳಿ ಅವರನ್ನು ಕಣಕ್ಕಿಳಿಸಿದ್ದು ಅವರಿಗೆ ಪ್ರಥಮ ಪ್ರಾಶ್ಯಸ್ತದ ಮತ ನೀಡುವಂತೆ ಅವರು ಕೋರಿಕೊಂಡರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಹುಕ್ಕೇರಿ ಕ್ಷೇತ್ರದಲ್ಲಿ ಮತದಾರರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಭಯಮುಕ್ತರಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಬರುವ 6 ವರ್ಷದವರೆಗೆ ಅಭ್ಯರ್ಥಿಯೂ ಆದ ಸಹೋದರ ಚನ್ನರಾಜ ಹಾಗೂ ತಾವು ಮನೆಯ ಮಕ್ಕಳಂತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇವೆ ಎಂದರು.
ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಮಿನಿ ವಿಶ್ವಸಮರದಂತಿರುವ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕಿದ್ದು 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಿದ್ಧವಾಗಬೇಕಿದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ತಮ್ಮಲ್ಲಿರುವ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ತಮಗೆ ಮತ ಚಲಾಯಿಸಬೇಕು. ಮತದಾರರ ನಂಬಿಕೆ, ವಿಶ್ವಾಸಕ್ಕೆ ದ್ರೋಹವಾಗದಂತೆ ಕೆಲಸ ನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಸಚಿವರಾದ ಪ್ರಕಾಶ ಹುಕ್ಕೇರಿ, ಎ.ಬಿ.ಪಾಟೀಲ, ವೀರಕುಮಾರ ಪಾಟೀಲ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬ್ಲಾಕ್ ಅಧ್ಯಕ್ಷರಾದ ಅಶೋಕ ಅಂಕಲಗಿ, ಸಂತೋಷ ಮುಡಸಿ, ಮುಖಂಡರಾದ ವಿಜಯ ರವದಿ, ಕಿರಣ ರಜಪೂತ, ಮಲ್ಲಿಕಾರ್ಜುನ ರಾಶಿಂಗೆ, ಅವಿನಾಶ ನಲವಡೆ, ರಾಜು ಸಿದ್ನಾಳ, ಕೆಂಪಣ್ಣಾ ಶಿರಹಟ್ಟಿ, ಶಾನೂಲ್ ತಶೀಲ್ದಾರ ಮತ್ತಿತರರು ಉಪಸ್ಥಿತರಿದ್ದರು.
ಮಹೇಶ ಹಟ್ಟಿಹೊಳಿ ನಿರೂಪಿಸಿದರು. ದಿಲೀಪ ಹೊಸಮನಿ ಸ್ವಾಗತಿಸಿದರು. ಚಂದು ಗಂಗನ್ನವರ ವಂದಿಸಿದರು. ಇದೇ ವೇಳೆ ಜೆಡಿಎಸ್, ಬಿಜೆಪಿ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾದರು.