ಬೆಳಗಾವಿ: ಜಿಲ್ಲೆಯ ವಿಧಾನ ಪರಿಷತ್ ಸ್ಥಾನದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಎರಡ್ಮೂರು ದಿನಗಳಲ್ಲಿ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಯ ಆಯ್ಕೆ ಕುರಿತು ಈಗಾಗಲೇ ವರಿಷ್ಠರೊಂದಿಗೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಇನ್ನೂ ಎರಡು, ಮೂರು ದಿನಗಳಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದರು.
ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ್ ಪಾಟೀಲ್ ಹಾಗೂ ಕಾಂಗ್ರೆಸ್ ನಾಯಕ ಚನ್ನರಾಜ್ ಹಟ್ಟಿಹೊಳಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಸಿದ್ಧವಾಗಿರುವ ಅಭ್ಯರ್ಥಿಯ ಆಯ್ಕೆಗೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಪಕ್ಷದಿಂದ ಒಬ್ಬ ಅಭ್ಯರ್ಥಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಒಂದು ಸ್ಥಾನ ಗೆಲ್ಲುವಷ್ಟು ಸದಸ್ಯರು ನಮ್ಮ ಜೊತೆಗೆ ಇದ್ದಾರೆ. ಯಾರೇ ಅಭ್ಯರ್ಥಿಯಾದ್ರು ಗೆಲ್ಲಿಸುವ ಸಿದ್ಧತೆಯಲ್ಲಿ ನಾವು ಇದ್ದೇವೆ ಎಂದರು.
ಉದ್ಯಮಿ ಲಖನ್ ಜಾರಕಿಹೊಳಿ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಈಗ ಅವರು ನಮ್ಮ ಪಕ್ಷದಲ್ಲಿಲ್ಲ. ಬಿಜೆಪಿಯಿಂದ ಸ್ಪರ್ಧಿಸುವುದಾದರೇ ಸ್ಪರ್ಧಿಸಲಿ; ಡಿಸೆಂಬರ್ 23ರ ನಂತರ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಸತೀಶ ಹೇಳಿದರು.