ಹಾನಗಲ್: ಬಿಜೆಪಿಯವರು ನೀಡುತ್ತಿರುವ ಹಣ ಒಂದು ದಿನದ ಖರ್ಚಿಗೆ ಮಾತ್ರ ಸಾಲುತ್ತದೆ. ಹೀಗಾಗಿ, ಹಣ ಹಾಗೂ ಇನ್ನಿತರ ಆಮಿಷಗಳಿಗೆ ಮತದಾರರು ಮರುಳಾಗದೇ ರಾಜ್ಯ ಹಾಗೂ ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮನವಿ ಮಾಡಿದರು.
ಮತಕ್ಷೇತ್ರದ ಮತ್ತಂಗ, ಸಮ್ಮಸಗಿ ಸೇರಿ ವಿವಿಧ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಪರ ಇಂದು ಪ್ರಚಾರ ನಡೆಸಿ ಅವರು ಮಾತನಾಡಿದರು.
ದೇಶದ ಜನರು ಎರಡು ಬಾರಿ ಮೋಸ ಹೋಗಿದ್ದಾರೆ. ಅದರ ಪರಿಣಾಮ ರಾಜ್ಯದ ಚುನಾವಣೆ ಮೇಲೂ ಆಗಿತ್ತು. ಆದರೆ, ಈ ಬಾರಿ ಮತ್ತೆ ಮೋಸ ಹೋಗಬೇಡಿ. ಮುಖ್ಯವಾಗಿ ಯುವ ಮತದಾರರು ಈ ಬಾರಿ ಬಿಜೆಪಿಯವರ ಸುಳ್ಳು ಭರವಸೆಗಳಿಗೆ ಮರುಳಾಗಬಾರದು ಎಂದರು.
ಪ್ರಧಾನಿ ಮೋದಿ ಅವರು ದೇಶದ ಜನರಿಗೆ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ, ದೇಶವನ್ನೇ ಮಾರಲು ಹೊರಟಿದ್ದಾರೆ. ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿಬಡಜನರ ಜೀವನವನ್ನು ದುಸ್ತರವನ್ನಾಗಿಸಿದ್ದಾರೆ ಎಂದು ಆರೋಪಿಸಿದರು.
1 ರೂ. ಇದ್ದ ಕಡ್ಡಿ ಪೊಟ್ಟಣದ ಬೆಲೆ ಕೂಡ 2 ರೂ.ಗೆ ಏರಿಕೆ ಮಾಡಲಾಗಿದೆ. ಪ್ರತಿಯೊಂದು ವಸ್ತುಗಳ ಬೆಲೆಯನ್ನು ಕೂಡ ಕೇಂದ್ರ ಸರ್ಕಾರ ಹುಡುಕಿ, ಹುಡುಕಿ ಏರಿಕೆ ಮಾಡುತ್ತಿದೆ ಎಂದು ಸತೀಶ ವ್ಯಂಗ್ಯವಾಡಿದರು.
ಯೋಜನೆಗಳಿಗೆ ತಡೆ:
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅನೇಕ ಯೋಜನೆಗಳನ್ನು ನಿಲ್ಲಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ದುರಾಡಳಿತ ನಡೆಸುತ್ತಿದೆ. ಬಿಜೆಪಿ ಸರ್ಕಾರ ಎರಡೂವರೆ ವರ್ಷದಲ್ಲಿ ಒಂದೇ ಒಂದು ಆಶ್ರಯ ಮನೆಗಳನ್ನು ನಿರ್ಮಿಸಿಲ್ಲ. ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿದ್ದ ಮನೆಗಳ ಬಿಲ್ ಗಳನ್ನು ಕೂಡ ನೀಡಿಲ್ಲ. ಯಾವುದೇ ಯೋಜನೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಹೊಸ ಯೋಜನೆಗಳನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ಎಕ್ಸ್ ಪರ್ಟ್ ಗಳಾಗಿದ್ದಾರೆ. ಬಿಜೆಪಿಯ ದೆಹಲಿ ನಾಯಕರಿಂದ ಹಿಡಿದು ಗ್ರಾಪಂ ಸದಸ್ಯರ ವರೆಗೆ ಎಲ್ಲರೂ ಸುಳ್ಳಿನ ಸರದಾರರೇ ಆಗಿದ್ದಾರೆ. ಚುನಾವಣೆಯಲ್ಲಿ ಗಿಮಿಕ್ ನಡೆಸಲು ಬಿಜೆಪಿಯ ಗ್ರಾಪಂ ಸದಸ್ಯರು ಈಗ ಬಂದು ನಿಮಗೆ ಮನೆ ನಿರ್ಮಿಸಿಕೊಡುತ್ತೇವೆ. ನಿಮ್ಮ ದಾಖಲಾತಿಗಳನ್ನು ಕೊಡಿ ಎಂದು ಜನರನ್ನು ಕೇಳುತ್ತಿದ್ದಾರೆ. ಅವರ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ ಎಂದು ಹೇಳಿದರು.
ರಾಜ್ಯ, ಕೇಂದ್ರಕ್ಕೆ ತಕ್ಕ ಪಾಠ ಕಲಿಸಿ:
ಉಪಚುನಾವಣೆ ಕೇವಲ ಹಾನಗಲ್ ಗೆ ಸೀಮಿತವಲ್ಲ. ಇದು ರಾಜ್ಯ ಮತ್ತು ದೇಶದ ಗಮನಸೆಳೆಯುವ ಚುನಾವಣೆಯಾಗಿದೆ. ಇಲ್ಲಿ ಒಂದು ವೋಟು ಕೂಡ ಮುಖ್ಯವಾಗಿದೆ. ಹೀಗಾಗಿ ಕ್ಷೇತ್ರದ ಜನರು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರನ್ನು ಗೆಲ್ಲಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಕ್ಕ ಪಾಠಕಲಿಸಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿತ್ತು. ಜನಪರವಾದ ಅನೇಕ ಯೋಜನೆಗಳನ್ನು ಜಾರಿಗೊಳಿಸಿತ್ತು. ಇವುಗಳನ್ನು ಮನಗಂಡು ಜನರು ಕಾಂಗ್ರೆಸ್ ಮತ ನೀಡಬೇಕು ಎಂದರು.
ಶಾಸಕರಾದ ಮಹಾಂತೇಶ ಕೌಜಲಗಿ, ಮಾಜಿ ಸಚಿವರಾದ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಸೇರಿ ಅನೇಕ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.