ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾಜಿ ಯೋಧನೊಬ್ಬ ತನ್ನ ನಾಲ್ವರು ಮಕ್ಕಳಿಗೆ ವಿಷ ನೀಡಿ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಸೋಂಕಿನಿಂದ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ ಇವರು ನಾಲ್ಕು ಮಕ್ಕಳಿಗೆ ವಿಷ ಪ್ರಾಶನ ಮಾಡಿ ತಾನೂ ದಾರುಣವಾಗಿ ಸಾವಿಗೀಡಾಗಿರುವುದು ಅತ್ಯಂತ ದುಃಖಕರ ಸಂಗತಿ. ಇಂತಹ ದುಡುಕಿನ ನಿರ್ಧಾರವನ್ನು ಅವರು ಕೈಗೊಳ್ಳಬಾರದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜೀವನದಲ್ಲಿ ಎಲ್ಲರಿಗೂ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ, ಜೀವನದ ಸವಾಲುಗಳಿಂದ ನಾವು ಕುಗ್ಗಬಾರದು. ಸಮಸ್ಯೆಗಳಿಗೆ ಹೆದರಿ ಅಥವಾ ಸಮಸ್ಯೆಗಳಿಂದ ಕುಗ್ಗಿ ಜೀವ ಕಳೆದುಕೊಳ್ಳಬಾರದು ಎಂದು ಸತೀಶ ಜಾರಕಿಹೊಳಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಏನಿದು ಪ್ರಕರಣ?:
ಪತ್ನಿ ಸಾವಿನಿಂದ ಮನನೊಂದು ಮಾಜಿ ಸೈನಿಕರೊಬ್ಬರು ತನ್ನ ನಾಲ್ಕು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹುಕ್ಕೇರಿ ತಾಲ್ಲೂಕಿನ ಬೋರಗಲ್ ಗ್ರಾಮದಲ್ಲಿ ಇಂದು ನಡೆದಿತ್ತು.
ಗೋಪಾಲ ಹಾದಿಮನಿ (46) ಹಾಗೂ ಮಕ್ಕಳಾದ ಸೌಮ್ಯಾ ಹಾದಿಮನಿ (19), ಸ್ವಾತಿ ಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನಾ ಹಾದಿಮನಿ (8) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.
ಗೋಪಾಲ ಅವರ ಪತ್ನಿ ಜುಲೈ 6 ರಂದು ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಮೃತಪಟ್ಟಿದ್ದರು. ಇದರಿಂದ ಮನನೊಂದು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.