ಹಾನಗಲ್: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿಯವರು ರಾಮಜಪವನ್ನು ಬಿಟ್ಟು, ಜನರಿಗೆ ಹಣ ಹಂಚಲು ಶುರು ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.
ಮತಕ್ಷೇತ್ರದ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಾದಾಮಗಟ್ಟ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
“ಬಿಜೆಪಿಯವರಿಗೆ ಅಭಿವೃದ್ಧಿಯ ಬಗ್ಗೆ ಮಾತನಾಡುವ ಧೈರ್ಯವಿಲ್ಲ. ಹೀಗಾಗಿ, ಹಣ ಹಂಚುವ ಮೂಲಕ ಮತ ಪಡೆಯುವ ಸಂಚು ನಡೆಸಿದ್ದಾರೆ. ಜನರು ಎಚ್ಚರ ವಹಿಸಬೇಕು ಎಂದು ಹೇಳಿದರು.
ಬಿಜೆಪಿಯವರು ನೀಡುತ್ತಿರುವ ಹಣವನ್ನು ತೆಗೆದುಕೊಳ್ಳಬೇಡಿ ಎಂದು ನಾನು ಹೇಳುವುದಿಲ್ಲ. ಹಣ ತೆಗೆದುಕೊಂಡರು ಕೂಡ ಕಾಂಗ್ರೆಸ್ ಗೆ ಮತ ನೀಡಿ ಎಂದು ಸತೀಶ ಹೇಳಿದರು. ಇದಕ್ಕೆ ಪ್ರಚಾರ ಸಭೆಯಲ್ಲಿದ್ದ ಜನರು ಕೂಡ ಸಹಮತ ವ್ಯಕ್ತಪಡಿಸಿದರು.
ಮಾಜಿ ಸಚಿವರಾದ ರಮಾನಾಥ ರೈ, ವೀರಕುಮಾರ ಪಾಟೀಲ, ಮಾಜಿ ಸಂಸದ ಬಿ.ವಿ. ನಾಯಕ್, ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಪಾಲಯ್ಯಾ, ಯಾಸಿರಖಾನ ಪಠಾಣ, ರೇಣುಕಾ ಕಳ್ಳಿ, ಸುರೇಶ ಮಾಗಡಿ, ಹನುಮಂತ ಕುರಿ ಸೇರಿ ಅನೇಕ ಮುಖಂಡರು ಹಾಗೂ ನೂರಾರು ಜನರು ಪಾಲ್ಗೊಂಡಿದ್ದರು.