ನಿಪ್ಪಾಣಿ ತಾಲೂಕಿನ ಲಖನಾಪೂರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ; ಚಿಕ್ಕೋಡಿ ತಾಲೂಕಿನ ವಾಳಕಿಯಲ್ಲಿ ಕಬಡ್ಡಿ ಪಂದ್ಯಾವಳಿಗೆ ಚಾಲನೆ
ನಿಪ್ಪಾಣಿ: ತಾಲೂಕಿನ ಲಖನಾಪೂರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಯುವಕ ಮಂಡಳ ಹಾಗೂ ಮಹರ್ಷಿ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ. ರಾಮಾಯಣ ಇಡೀ ಮನುಕುಲಕ್ಕೆ ಮಾರ್ಗದರ್ಶನ ನೀಡುವ ಗ್ರಂಥವಾಗಿದೆ ಎಂದು ಹೇಳಿದರು.
ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ. ಜಾತಿ-ಧರ್ಮದ ಹೆಸರಿನಲ್ಲಿ ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳು ಕುಸಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಮಹಾಕಾವ್ಯ ದಾರಿದೀಪವಾಗಿ ತೋರುತ್ತದೆ ಎಂದರು.
ಇಂದಿನ ಮಕ್ಕಳು ಹಾಗೂ ಯುವಕರು ಮಹರ್ಷಿ ವಾಲ್ಮೀಕಿ ಅವರ ಜೀವನ ಹಾಗೂ ರಾಮಾಯಣದ ಬಗ್ಗೆ ತಿಳಿದುಕೊಳ್ಳಬೇಕು. ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕಾಕಾಸಾಹೇಬ ಪಾಟೀಲ, ನಾಯಕ್, ಅಶೋಕ ಸೇರಿ ವಾಲ್ಮೀಕಿ ಯುವಕ ಮಂಡಳದ ಸದಸ್ಯರು, ಮಹರ್ಷಿ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು, ಮುಖಂಡರು ಸೇರಿದಂತೆ ಗ್ರಾಮದ ನೂರಾರು ಜನರು ಪಾಲ್ಗೊಂಡಿದ್ದರು.
ಕಬಡ್ಡಿ ಪಂದ್ಯಾವಳಿಗೆ ಚಾಲನೆ:
ಚಿಕ್ಕೋಡಿ ತಾಲೂಕಿನ ವಾಳಕಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಅಭಿಮಾನಿ ಬಳಗದಿಂದ ಇಂದು ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಚಾಲನೆ ನೀಡಿದರು.
ನಂತರ ಗ್ರಾಮದ ಯುವಕರು ರಚಿಸಿರುವ ರಾಹುಲ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗವನ್ನು ಉದ್ಘಾಟಿಸಿದರು.