ಹಾನಗಲ್: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮತಕ್ಷೇತ್ರದ ವಿವಿಧೆಡೆ ಇಂದು ಬಿರುಸಿನ ಪ್ರಚಾರ ನಡೆಸಿದರು.
ಮತಕ್ಷೇತ್ರದ ಮಾರನಬೀಡ, ಬೈಚವಳ್ಳಿ ಹಾಗೂ ಸಾವಿಕೇರಿ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಅವರು ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಮತಯಾಚನೆ ಮಾಡಿದರು.
ಶ್ರೀನಿವಾಸ್ ಮಾನೆ ಯೋಗ್ಯ ಅಭ್ಯರ್ಥಿ:
ಸಾವಿಕೇರಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸತೀಶ ಅವರು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಯೋಗ್ಯ ಅಭ್ಯರ್ಥಿಯಾಗಿದ್ದಾರೆ. ಒಬ್ಬ ಯೋಗ್ಯ ಅಭ್ಯರ್ಥಿಯನ್ನು ಕಳೆದುಕೊಳ್ಳುವುದರಿಂದ ಅವರಿಗೆ ನಷ್ಟವಾಗುವುದಿಲ್ಲ, ಬದಲಾಗಿ ಆ ಕ್ಷೇತ್ರದ ಎಲ್ಲ ಜನರಿಗೆ ನಷ್ಟವಾಗುತ್ತದೆ. ಹೀಗಾಗಿ, ಮತದಾರರು ಮಾನೆ ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದ ಹಿಂದಿನ ಶಾಸಕರು ಜನರ ಮಧ್ಯದಲ್ಲಿ ಇರುತ್ತಲೇ ಇರಲಿಲ್ಲ. ಜನರ ಕೈಗೆ ಸಿಗುತ್ತಿರಲಿಲ್ಲ. ಆದರೆ, ಶ್ರೀನಿವಾಸ್ ಮಾನೆ ಅವರು ಕಳೆದ ಚುನಾವಣೆಯಲ್ಲಿ ಪರಾಜಿತಗೊಂಡರು ಕೂಡ ಕ್ಷೇತ್ರದಲ್ಲೇ ಮನೆ ಮಾಡಿ ಉಳಿದರು. ಜನರ ಸೇವೆಯನ್ನು ನಿಸ್ವಾರ್ಥವಾಗಿ ಮುಂದುವರೆಸಿದರು. ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆ, ಅಗತ್ಯ ಸಾಮಗ್ರಿಗಳ ವಿತರಣೆ ಸೇರಿದಂತೆ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಹೀಗಾಗಿ, ಸೇವಾ ಮನೋಭಾವವುಳ್ಳ ಮಾನೆ ಅವರಿಗೆ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ಹಾನಗಲ್ ನಿಂದ ದೇಶಕ್ಕೆ ಸಂದೇಶ ಹೋಗಲಿ:
ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ಅಧಿಕಾರದ ದುರ್ಬಳಕೆ ಮಾಡಿಕೊಂಡು, ಎಷ್ಟೇ ಹಣ ಖರ್ಚು ಮಾಡಿದರು ಕೂಡ ಕಾಂಗ್ರೆಸ್ ಜಯಗಳಿಸಿತು. ಅದೇ ರೀತಿ ಹಾನಗಲ್ ನಲ್ಲಿ ಬಿಜೆಪಿಯವರು ಎಷ್ಟೇ ಪ್ರಭಾವ ಬಳಸಿದರೂ ಕೂಡ ಮತದಾರರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಬೇಕು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎಂಬ ಸಂದೇಶವನ್ನು ಹಾನಗಲ್ ಮತದಾರರು ರವಾನಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್, ಕಾಂಗ್ರೆಸ್ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಪಾಲಯ್ಯ, ಪ್ರಕಾಶ ಹಾದಿಮನಿ ಸೇರಿ ಅನೇಕ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.