ಬೆಳಗಾವಿ: ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ಆಗಬೇಕಿದ್ದ ಬುಡಾ ಮೀಟಿಂಗ್ ಬಿಜೆಪಿ ಶಾಸಕರು ಮತ್ತು ಬುಡಾ ಅಧ್ಯಕ್ಷರ ನಡುವಿನ ಹಗ್ಗಜಗ್ಗಾಟದಿಂದ ಮತ್ತೆ ಮುಂದಕ್ಕೆ ಹೋಗಿದೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ 4ನೇ ಸಭೆಯನ್ನು ಸೋಮವಾರ ಕರೆಯಲಾಗಿತ್ತು. ಕಳೆದ ಮೂರು ಸಭೆಗೆ ಗೈರಾಗಿದ್ದ ನಗರ ಬಿಜೆಪಿ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಮತ್ತೆ ಗೈರಾಗಿದ್ದರು.
ಸತೀಶ ಜಾರಕಿಹೊಳಿ- ಹೆಬ್ಬಾಳಕರ್ ಭಾಗಿ:
ಕಾಂಗ್ರೆಸ್ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರ ಸಭೆಗೆ ಆಗಮಿಸಿದ್ದರು.ನಿಗಧಿತ ಸಮಯಕ್ಕೆ ಅವರು ಬಂದು ಹಾಜರಾಗಿದ್ದರು ಕೂಡ, ಆಡಳಿತ ಪಕ್ಷದ ಶಾಸಕರೇ ಸಭೆಗೆ ಆಗಮಿಸಿದೇ ಅಗೌರವ ತಂದಿದ್ದಾರೆ. ಈ ಮೂಲಕ ಬೆಳಗಾವಿ ನಗರದ ಜನರಿಗೆ ಬಿಜೆಪಿ ಶಾಸಕರು ಅವಮಾನ ಮಾಡಿದ್ದಾರೆ.
ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಮತ್ತು ತಮ್ಮದೇ ಪಕ್ಷದ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಮಧ್ಯದ ಭಿನ್ನಾಭಿಪ್ರಾಯದಿಂದ ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ನಗರದ ಅಭಿವೃದ್ಧಿ ಕುಂಠಿತವಾಗುವಂತಾಗಿದೆ.
ಅಕ್ಟೋಬರ್ 25ಕ್ಕೆ ಸಭೆ ಮುಂದೂಡಿಕೆ:
ಈ ಬಾರಿಯೂ ಸಭೆಗೆ ಶಾಸಕರು ಆಗಮಿಸದ ಹಿನ್ನೆಲೆಯಲ್ಲಿ ಸಭೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಲಾಗಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಬೆ ನಡೆದು ಒಂದು ವರ್ಷವೇ ಸಮೀಪಿಸುತ್ತಿದೆ. ಆದರೂ, ಕೂಡ ಈ ಬಗ್ಗೆ ಸ್ಥಳೀಯ ಶಾಸಕರಾದ ಅನಿಲ್ ಬೆನಕೆ ಹಾಗೂ ಅಭಯ ಪಾಟೀಲ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇವರ ಗೈರಿನಿಂದ ಸಭೆ ಪದೇ ಪದೇ ಮುಂದಕ್ಕೆ ಹೋಗುವಂತಾಗಿದೆ.
ಕಾನೂನು ರೀತಿ ಕ್ರಮ: ಸತೀಶ ಜಾರಕಿಹೊಳಿ
ಸಭಗೆ ಆಗಮಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ನವೆಂಬರ್ ನಲ್ಲಿ ಬುಡಾ ಸಭೆ ಆಗಿತ್ತು. ಇದಾದ ಬಳಿಕ ಯಾವುದೇ ಸಭೆ ನಡೆದಿಲ್ಲ. ಮುಂದಿನ ಬಾರಿಯೂ ಸಭೆಗೆ ಬಿಜೆಪಿ ಶಾಸಕರು ಆಗಮಿಸದೇ ಇದ್ದರೇ, ಬುಡಾ ಅಧ್ಯಕ್ಷರು ಕಾನೂನು ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸದಸ್ಯರ ಸಂಖ್ಯೆ ಇರದ ಹಿನ್ನೆಲೆ ಯಾವುದೇ ರೀತಿ ಚರ್ಚೆ ಆಗಿಲ್ಲ. ಕಣಬರಗಿ ಸ್ಕೀಮ್-61 ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷರ ಅಸಮಾಧಾನ:
ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಮಾತನಾಡಿ, ಶಾಸಕರಿಗೆ ತಿಳಿಸಿಯೇ ನಾವು ಸಭೆಯನ್ನು ಕರೆದಿದ್ದೆವು. ಶಾಸಕರು, ಸದಸ್ಯರು ಬಾರದ ಹಿನ್ನೆಲೆ ಎರಡು ಬಾರಿ ಸಭೆ ಮುಂದಕ್ಕೆ ಹೋಗಿದೆ. ನಮ್ಮದೇ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇರುವಾಗ ಸಭೆಗೆ ಶಾಸಕರು ಗೈರಾಗಿರುವುದು ಸರಿಯಲ್ಲ. ಇದರಿಂದ ನಗರದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಬುಡಾ ಜನರ ಆಶೋತ್ತರ ಈಡೇರಿಸುವ ಕೆಲಸ ಮಾಡಬೇಕಿತ್ತು. ಆದರೆ ಜನಪ್ರತಿನಿಧಿಗಳ ಒಣ ಪ್ರತಿಷ್ಠೆಯಿಂದಾಗಿ ಈ ರೀತಿ ಸಭೆ ಮುಂದಕ್ಕೆ ಹೋಗುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.