ಗೋಕಾಕ: ತಾಲೂಕಿನ ಗಣೇಶವಾಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕವನ್ನು ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಹಾಗೂ ಸರ್ವೋತ್ತಮ ಜಾರಕಿಹೊಳಿ ಅವರು ಇಂದು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ನಾಡಿನ ಮಹಾನ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಕ್ರೀಡಾಪಟುಗಳು ಸೇರಿ ಅನೇಕರು ದೇಶಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಿ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಪ್ರಪಂಚದ ಮೂಲೆ ಮೂಲೆಯಲ್ಲೂ ಕನ್ನಡಿಗರಿದ್ದು, ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ. ಪ್ರತಿಯೊಬ್ಬರು ಕನ್ನಡದ ಮಹತ್ವವನ್ನು ಅರಿಯಬೇಕು. ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಬೆಳಗಾವಿ ಗಡಿ ಜಿಲ್ಲೆಯಾಗಿರುವುದರಿಂದ ಕರ್ನಾಟಕ ರಕ್ಷಣಾ ವೇದಿಕೆಯಂತಹ ಸಂಘಟನೆಗಳ ಪಾತ್ರ ಇಲ್ಲಿ ಮಹತ್ವದ್ದಾಗಿದೆ. ಭಾಷೆಯ ಬೆಳವಣಿಗೆಗೆ ಸಂಘಟನೆಗಳೊಂದಿಗೆ ಜನರು ಕೂಡ ಕೈಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ಖಾನಪ್ಪನವರ, ಮದನ ದೇಶಪಾಂಡೆ, ಶಿವಲಿಂಗ ಪೂಜೇರಿ, ತ್ರಿಪತಿ ಗಣೇಶವಾಡಿ, ಭರನಗೌಡ ಪಾಟೀಲ, ಲಕ್ಷ್ಮಣ ಗನ್ನಪ್ಪಗೋಳ, ರಮೇಶ ಪೂಜೇರಿ, ಭೀಮಶಿ ಕೆಂಪನಗೋಳ, ಸಿದ್ದರಾಮ ಮೂಲಿಮನಿ ಸೇರಿದಂತೆ ಕರವೇ ಘಟಕದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.