ಬೆಂಗಳೂರು: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಸಾಧನೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಬಾರಿಗೆ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಎದುರಿಸಿದ್ದೇವೆ. ಸ್ಥಳೀಯವಾಗಿ ಶಾಸಕರು ಹಾಗೂ ಸಂಸದರು ಬಿಜೆಯವರೇ ಆಗಿದ್ದಾರೆ. ಆಡಳಿತ ಸರ್ಕಾರವು ಅವರದ್ದೇ ಇದೆ. ಹೀಗಾಗಿ, ಸಹಜವಾಗಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದೆ. ಇದರ ಹೊರತಾಗಿಯೂ ಕಾಂಗ್ರೆಸ್ ಉತ್ತಮ ಸಂಖ್ಯೆಯ ಸ್ಥಾನಗಳನ್ನು ಗಳಿಸಿದೆ ಎಂದರು.
ಕಾಂಗ್ರೆಸ್ 15 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಕಾಂಗ್ರೆಸ್ 10 ಸ್ಥಾನಗಳನ್ನು ಜಯಿಸಿದೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ 4 ಜನ ಬಂಡಾಯ ಅಭ್ಯರ್ಥಿಗಳು ಗೆದ್ದಿದ್ದಾರೆ. ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡದ ಕಾರಣ ಇನ್ನೂ ಕೆಲವೊಂದಿಷ್ಟು ಸ್ಥಾನಗಳನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸತೀಶ ಪ್ರತಿಕ್ರಿಯಿಸಿದರು.
ರಾಜ್ಯಮಟ್ಟದ ನಾಯಕರು ಪ್ರಚಾರಕ್ಕೆ ಬರುವುದಿಲ್ಲ. ಸ್ಥಳೀಯ ನಾಯಕರು ಮಾತ್ರ ಪ್ರಚಾರ ನಡೆಸುತ್ತೇವೆ ಎಂದು ನಾವು ಮೊದಲೇ ಹೇಳಿದ್ದೆವು. ಹೀಗಾಗಿ, ಒಗ್ಗಟ್ಟು ಇರಲಿಲ್ಲ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.