ಗೋಕಾಕ: ಕಳೆದೆರಡು ತಿಂಗಳ ಹಿಂದೆ ಘಟಪ್ರಭಾ ನದಿ ಪ್ರವಾಹದಿಂದ ಜಲಾವೃತಗೊಂಡು ಸಂಪೂರ್ಣ ಕೊಚ್ಚಿ ಹೋಗಿದ್ದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆಯ ಕಾಮಗಾರಿ ಸದ್ಯ ಮುಕ್ತಾಯಗೊಂಡಿದ್ದು, ಸೇತುವೆಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಸತೀಶ ಜಾರಕಿಹೊಳಿ ಅವರು ಖುದ್ದಾಗಿ ಸೇತುವೆಯನ್ನು ಪರಿಶೀಲನೆ ಮಾಡಿ, ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಳೆಯಿಂದ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಪರ್ಕ ಕಡಿತದಿಂದ ಸಮಸ್ಯೆ:
ಜತ್ತ-ಜಾಂಬೋಟಿ ರಸ್ತೆಯಲ್ಲಿರುವ ಲೋಳಸೂರ ಸೇತುವೆಯೂ ಮಹಾರಾಷ್ಟ್ರ, ವಿಜಯಪುರ, ಅಥಣಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿದೆ. ಪ್ರವಾಹದಿಂದ ಸೇತುವೆಯ ಸಂಪರ್ಕ ಕಡಿತಗೊಂಡಿದ್ದರಿಂದ ಕೆಲ ದಿನಗಳಿಂದ ದುರಸ್ತಿ ಕಾರ್ಯ ನಡೆಯುತ್ತಿತ್ತು.
ಸೇತುವೆ ಸಂಪರ್ಕ ಕಡಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬೇರೆ ಮಾರ್ಗವಾಗಿ ಸಂಚರಿಸಬೇಕಿದ್ದರಿಂದ ಪ್ರಯಾಣಿಕರ ಜೇಬಿಗೂ ಹೊರೆಯಾಗಿತ್ತು.
ಶಾಸಕರ ಸತತ ಪ್ರಯತ್ನ:
ಸೇತುವೆಯನ್ನು ದುರಸ್ತಿಗೊಳಿಸಲು ಶಾಸಕ ಸತೀಶ ಜಾರಕಿಹೊಳಿ ಅವರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಚರ್ಚಿಸಿ, ಆದಷ್ಟು ಬೇಗ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಪ್ರಯತ್ನ ಪಟ್ಟಿದ್ದರು. ಅವರ ನಿರಂತರ ಪ್ರಯತ್ನದಿಂದಾಗಿ ಸದ್ಯ ಸೇತುವೆ ಸಂಚಾರಕ್ಕೆ ಸಿದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಸತೀಶ ಜಾರಕಿಹೊಳಿ ಅವರು ಖುದ್ದಾಗಿ ಸೇತುವೆಯನ್ನು ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.