ಬೆಳಗಾವಿ: ನಗರದ 45ನೇ ವಾರ್ಡ್ ನ ಹಿಂಡಾಲ್ಕೊ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶ್ರೀ ನಾಯ್ಕ್ ಪರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಂದು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಉಸ್ತುವಾರಿ ಸಚಿವ ಹಾಗೂ ಫೀರೋಜ್ ಸೇಠ್ ಶಾಸಕರಾಗಿದ್ದ ಸಂದರ್ಭದಲ್ಲಿ ಸಮೀಪದ ಬಸವನಕೊಳ್ಳ ಅರಣ್ಯಭೂಮಿಯಲ್ಲಿ ನೀರಿನ ಶುದ್ಧೀಕರಣ ಘಟಕ ನಿರ್ಮಿಸುವ ಮೂಲಕ 45ನೇ ವಾರ್ಡ್ ಸೇರಿ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದೇವೆ. ಈಗಲೂ ಈ ಭಾಗದ ಜನರು ಅದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಅಧಿಕಾರಾವಧಿಯಲ್ಲಿ ಕಣಬರ್ಗಿ ರಸ್ತೆ, ಬಾಕ್ಸೈಟ್ ರಸ್ತೆ, ಖಾನಾಪುರ ರಸ್ತೆ ನಿರ್ಮಾಣ, ಉದ್ಯಾನವನ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳ ನಿರ್ಮಾಣ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಹೀಗಾಗಿ, ಬಿಜೆಪಿಯವರಂತೆ ನಾವು ಯಾವುದೇ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ನಮ್ಮ ಅಭಿವೃದ್ಧಿ ಕಾರ್ಯಗಳೇ ನಮ್ಮ ಸಾಧನೆಯನ್ನು ಹೇಳುತ್ತವೆ. ನಮಗೆ ಪಾಲಿಕೆ ಅಧಿಕಾರ ಕೊಟ್ಟರೆ ಬೆಳಗಾವಿಯನ್ನು ನಾವು ಮಾದರಿ ನಗರವನ್ನಾಗಿಸುತ್ತೇವೆ ಎಂದರು.
ಬೆಳಗಾವಿ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತ ನೀಡಿ:
ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ, ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಫಿರೋಜ್ ಸೇಠ್, ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಅಭ್ಯರ್ಥಿ ರಾಜಶ್ರೀ ನಾಯ್ಕ್ ಸೇರಿ ಇನ್ನಿತರರು ಇದ್ದರು.