ಬೆಳಗಾವಿ: ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆಯ ಪಕ್ಷದ ಅಭ್ಯರ್ಥಿಗಳ ಪರ ಇಂದು (ಭಾನುವಾರ) ಸಂಜೆ ಕಾಂಗ್ರೆಸ್ ಮುಖಂಡರು ಬಿರುಸಿನ ಪ್ರಚಾರ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಸಚಿವ ಎಂ.ಬಿ. ಪಾಟೀಲ, ಶಾಸಕಿ ಅಂಜಲಿ ನಿಂಬಾಳಕರ್ ನೇತೃತ್ವದಲ್ಲಿ ಇಲ್ಲಿನ ಮಹಾಂತೇಶ ನಗರ ಹಾಗೂ ರಾಮತೀರ್ಥ ನಗರದಲ್ಲಿ ಮತಯಾಚನೆ ಮಾಡಿದ ಮುಖಂಡರು, ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಪಾಲಿಕೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರೇ ಶೇ.50 ರಷ್ಟು ಆಸ್ತಿ ತೆರಿಗೆ ರಿಯಾಯಿತಿ ನೀಡಲಾಗುವುದು. ಕೋವಿಡ್ ನಿಂದ ಸಂಕಷ್ಟಕ್ಕೀಡಾಗಿರುವ ವ್ಯಾಪಾರಿಗಳು, ವಾಹನ ಚಾಲಕರು ಸೇರಿ ಎಲ್ಲ ಶ್ರಮಿಕ ವರ್ಗದವರಿಗೆ 5 ಸಾವಿರ ರೂ. ಪರಿಹಾರ ಕೊಡಲಾಗುವುದು. ನಗರದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಮುಖಂಡರು ಭರವಸೆ ನೀಡಿದರು.
ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮನ್ನವರ್, ಕೆಪಿಸಿಸಿ ಸದಸ್ಯ ಮಲ್ಲಗೌಡ ಪಾಟೀಲ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ (ಆಡಳಿತ) ಪ್ರದೀಪ ಎಂ.ಜೆ. ಸೇರಿ ಇನ್ನಿತರರು ಇದ್ದರು.