ಸವದತ್ತಿ: ರೈತರಿಗೆ ಇನ್ನೂ ಕಡಿಮೆ ಬಡ್ಡಿದರದಲ್ಲಿ ಕೃಷಿ ಯಂತ್ರೋಪಕರಣಗಳು ಸಿಗಬೇಕು. ಅಂದಾಗ ರೈತರನ್ನು ಮತ್ತಷ್ಟು ಸ್ವಾವಲಂಭಿಗಳನ್ನಾಗಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಸರ್ಕಾರಗಳು ಗಮನಹರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಮಬನೂರ ಗ್ರಾಮದಲ್ಲಿ ಇಂದು ಹಮ್ಮಿಕೊಂಡಿದ್ದ ಮಬನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಟ್ರ್ಯಾಕ್ಟರ್ ಸಾಲ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತ ಸಮುದಾಯ ದೇಶದ ದೊಡ್ಡ ಸಮುದಾಯವಾಗಿದೆ. ಇಂದಿಗೂ ದೇಶದ ಶೇ.50 ರಿಂದ 60 ರಷ್ಟು ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರಗಳು ರೈತರನ್ನು ಮತ್ತಷ್ಟು ಸ್ವಾವಲಂಭಿಗಳನ್ನಾಗಿಸಲು ಹೊಸ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.
ಮಬನೂರ ಸಂಘದಿಂದ ರೈತರಿಗೆ ಶೇ.3 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂದು ಒಂದು ಟ್ರ್ಯಾಕ್ಟರ್ ಕೂಡ ವಿತರಿಸಲಾಗಿದೆ. ಸಂಘವನ್ನು ಸ್ಥಳೀಯವಾಗಿ ರೈತರೇ ನಿಭಾಯಿಸುತ್ತಿದ್ದಾರೆ. ಇದು ಸಂತಸದ ಸಂಗತಿ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿಂದ ಸಿಗುವ ಸೌಲಭ್ಯಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಸತೀಶ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಭೀಮಸಿ ಮೆಳಗಲಿ, ಮುಖಂಡರಾದ ಪಂಚನಗೌಡ ದ್ಯಾಮನಗೌಡರ, ವಿಶ್ವಾಸ ವೈದ್ಯ, ಅಗಸಿಮನಿ, ಅಂಗಡಿ, ಮೇಟಿ ಸೇರಿ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.