ಮೂಡಲಗಿ: ತಾಲೂಕಿನ ಸುಣದೊಳ್ಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ ಅಂಗವಾಗಿ ಇಂದು ರಾಯಣ್ಣನವರ ನೂತನ ಪ್ರತಿಮೆಯನ್ನು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಸಂಗೊಳ್ಳಿ ರಾಯಣ್ಣ ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿಯಾಗಿದ್ದಾರೆ. ಅವರು ಹುಟ್ಟಿದ ದಿನ ಸ್ವಾತಂತ್ರ್ಯ ದಿನವಾಗಿದ್ದರೇ, ಅವರು ನೇಣುಗಂಬಕ್ಕೇರಿದ ದಿನ ದೇಶದ ಗಣತಂತ್ರ (ಜ.26) ದಿನವಾಗಿದೆ. ಇಂತಹ ಮಹಾನ ಪುರುಷರಿಗೆ ಮಾತ್ರ ಈ ರೀತಿಯ ಚಮತ್ಕಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಂಗೊಳ್ಳಿ ರಾಯಣ್ಣ ಚಿಕ್ಕ ವಯಸ್ಸಿನಲ್ಲೇ ಜನರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರು. ಹೊಸ ಯುದ್ಧ ತಂತ್ರಗಳ ಮೂಲಕ ಬ್ರಿಟಿಷರನ್ನು ಸಿಂಹಸ್ವಪ್ನರಾಗಿ ಕಾಡಿದ್ದರು. ಆದರೆ, ದುರ್ದೈವದಿಂದ ಕೇವಲ 32ನೇ ವಯಸ್ಸಿನಲ್ಲೇ ಅವರು ಬ್ರಿಟಿಷರಿಂದ ನೇಣುಗಂಬಕ್ಕೇರಿದರು. ಅವರ ಹೋರಾಟವನ್ನು ಇಂದಿನ ಯುವಕರು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಯಣ್ಣ ಜನ್ಮದಿನಾಚರಣೆ ಆಚರಿಸಲು ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ರಾಯಣ್ಣ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳು ರಾಜ್ಯದ ಅನೇಕ ಶಾಲೆಗಳಿಗೆ ಇಂದು ರಾಯಣ್ಣ ಭಾವಚಿತ್ರಗಳನ್ನು ಪೂರೈಕೆ ಮಾಡಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನೆಯಬೇಕಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ, 267 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಇದರಿಂದ ಇಂದು ಸಂಗೊಳ್ಳಿ ಹಾಗೂ ನಂದಗಡ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿದ್ದು, ಅವುಗಳನ್ನು ಪ್ರವಾಸಿ ಸ್ಥಳ ಹಾಗೂ ಪುಣ್ಯಕ್ಷೇತ್ರಗಳನ್ನಾಗಿ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿನಯ ಕಟ್ಟಿಕಾರ್, ಶಿವು ಪಾಟೀಲ, ಅಡಿವೆಪ್ಪ ಕಂಕಾಳಿ, ಸಿದ್ದಾರೂಢ ವೇವನಗೋಳ, ಬಸಪ್ಪ ದೇವರಮನಿ, ಮುತ್ತು ಜಿಡ್ಡಿಮನಿ, ಅಶೋಕ ನಾಯ್ಕ, ಸಿದ್ದಪ್ಪ ಅಮನಿ, ತಮ್ಮಣ್ಣ ಮೊಕಾನಿ, ಪಾಂಡು ಮನ್ನಿಕೇರಿ, ಸಿದ್ದಾರೂಢ ಕಮತಿ, ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಕಾರ್ಯದರ್ಶಿ ನಿಂಗಪ್ಪ ಕುರುಬೇಟ ಸೇರಿ ಇನ್ನಿತರರು ಇದ್ದರು.